Mysore
27
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ವಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರಕ್ಕೆ ಸರ್ಕಾರದ ಆಡಳಿತ ಯಂತ್ರ ಬಳಕೆ : ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಪತಿಗೆ ಪತ್ರ ಬರೆದ ದಿನೇಶ್ ಗುಂಡೂರಾವ್

ಬೆಂಗಳೂರು : ಚುನಾವಣಾ ಮೂಡ್ ನಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರದ ಅಧಿಕೃತ ಕಾರ್ಯಕ್ರಮಗಳನ್ನೂ ವಿಪಕ್ಷಗಳನ್ನ ಹಣಿಯೋಕೆ ಬಳಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಸಂಬಂಧ ಮೋದಿ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಸಿಕಲ್ ಸೆಲ್ ರಕ್ತಹೀನ ನಿವಾರಣೆ ಮಿಷನ್ ಗೆ ಚಾಲನೆ ನೀಡುವ ಸರ್ಕಾರಿ ಕಾರ್ಯಕ್ರಮವನ್ನ ಪ್ರಧಾನಿ ಮೋದಿಯವರು ವಿಪಕ್ಷಗಳ ವಿರುದ್ಧ ಕಿಡಿಕಾರಲು ಬಳಸಿಕೊಂಡರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಪ್ರಧಾನಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿಲಿದ್ದು, ರಾಜ್ಯದ ಆರೋಗ್ಯ ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚರ್ಚಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ನಮಗೆ ಆಹ್ವಾನಿಸಿತ್ತು. ರಾಜ್ಯದ ಆರೋಗ್ಯ ಸಚಿವನಾಗಿ ನಾನು ವಿಕಾಸ ಸೌಧದಿಂದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ ಮೋದಿಯವರು ಯಾರೊಂದಿಗೂ ಚರ್ಚಿಸಿದೆ ವಿಪಕ್ಷಗಳನ್ನ ದೂಷಿಸುವ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಜನರಿಗೆ, ವಿಶೇಷವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ಜನರಿಗೆ ಅನುಕೂಲವಾಗುವಂತಹ ಯಾವುದೇ ಕೆಲಸವನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು.

ದೇಶದಲ್ಲಿ 70 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್, ಎಲ್ಲರಿಗೂ ಉಚಿತ ಪಡಿತರ, ಕೈಗೆಟುಕುವ ಆರೋಗ್ಯ ಮತ್ತು ಉದ್ಯೋಗ ಖಾತರಿಪಡಿಸಲು ಸಾಧ್ಯವಾಗಲಿಲ್ಲ. ಒಂದು ರಾಜ್ಯದಲ್ಲಿ ಉಚಿತ ವಿದ್ಯುತ್ ಘೋಷಣೆ ಮಾಡಿ ಜೊತೆಗೆ ವಿದ್ಯುತ್ ದರವನ್ನೂ ಹೆಚ್ಚಳ ಮಾಡಿತು. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು, ಘೋಷಣೆಗಳು ಸುಳ್ಳುಗಳಾಗಿವೆ. ದೇಶದ ಜನತೆ ಈ ಸುಳ್ಳು ಭರವಸೆಗಳ ಬಗ್ಗೆ ಎಚ್ಚರದಿಂದಿರಬೇಕೆಂದು ಹೇಳಿದ್ದಾರೆ.

ಸರ್ಕಾರಿ ಕಾರ್ಯಕ್ರಮದಲ್ಲಿ ವಿರೋಧ ಪಕ್ಷಗಳ ದೂಷಿಸುವುದು ಎಷ್ಟು ಸರಿ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಮೋದಿ ಸುಳ್ಳು ಪ್ರಚಾರ ಮಾಡಿದ್ದಾರೆ. ಪ್ರತಿಯೊಬ್ಬ ಪ್ರಜೆಯೂ ರಾಜಕೀಯ ವೇದಿಕೆಗಳಲ್ಲಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರು. ಆದರೆ ಪ್ರಧಾನಿಯೊಬ್ಬರು ಸರ್ಕಾರಿ ಸಮಾರಂಭದಲ್ಲಿ ರಾಜಕೀಯ ಪೂರ್ವಗ್ರಹಗಳನ್ನು ವ್ಯಕ್ತಪಡಿಸುವುದು ಅಕ್ಷಮ್ಯ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಪ್ರಾರಂಭದಲ್ಲಿ ಮೋದಿಯವರು ಪೀಡಿತ ಜನರು ಮತ್ತು ಮಿಷನ್ ಕಾರ್ಯತಂತ್ರದ ಬಗ್ಗೆ ಭಾಷಣ ಮಾಡಬೇಕಿತ್ತು. ಆದರೆ ಜನರ ಸಮಸ್ಯೆಗಳ ಬಗ್ಗೆ ಪ್ರಧಾನಿ ಗಮನಹರಿಸಲಿಲ್ಲ. ಬದಲಾಗಿ, ಅವರು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿಯಲ್ಲಿಯೇ ಸಮಯವನ್ನು ವ್ಯರ್ಥ ಮಾಡಿದರು.

2024 ರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ರಾಜಕೀಯ ಭಾಷಣಗಳಿಗೆ ಸರ್ಕಾರದ ಆಡಳಿತಯಂತ್ರ ಬಳಕೆಗೆ ಅವಕಾಶ ನೀಡಬಾರದು ಎಂದು ಸಚಿವರು ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರದ ಮುಖಾಂತರ ಮನವಿ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!