Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ವಿಪಕ್ಷ ಒಕ್ಕೂಟಕ್ಕೆ ‘ಇಂಡಿಯಾ’ ಹೆಸರು ಬಳಕೆ: 26 ಪಕ್ಷಗಳು, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ

ನವದೆಹಲಿ: ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಇಂಡಿಯಾ) ಎಂದು ಹೆಸರಿಟ್ಟಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ 26 ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರದ್ವಾಜ್‌ ಅವರ ಮೂಲಕ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ಸಂಜೀವ್‌ ನರುಲಾ ಅವರ ನೇತೃತ್ವದ ವಿಭಾಗೀಯ ಪೀಠವು, 26 ರಾಜಕೀಯ ಪಕ್ಷಗಳು, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಾಲಯಲ್ಲಿ ವಾದ ಮಂಡಿಸಿದ ಗಿರೀಶ್‌ ಭಾರದ್ವಾಜ್‌ ಅವರು “ವಿರೋಧ ಪಕ್ಷಗಳು ತಮ್ಮ ಸ್ವಹಿತಾಸಕ್ತಿಗಾಗಿ ಇಂಡಿಯಾದ ಹೆಸರು ಬಳಕೆ ಮಾಡುತ್ತಿವೆ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ, ಪಾರದರ್ಶಕ ಮತ್ತು ನ್ಯಾಯಯುತ ಮತದಾನಕ್ಕೆ ಅಡ್ಡಿಯಾಗುತ್ತದೆ. ಇದು ಜನರನ್ನು ಅನಗತ್ಯ ಹಿಂಸಾಚಾರಕ್ಕೆ ನೂಕಲಿದ್ದು, ದೇಶದ ಕಾನೂನು ಮತ್ತು ಸುವ್ಯವಸ್ಥೆ ಅಡ್ಡಿಯಾಗುತ್ತದೆ. ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ನಿಷೇಧ) ಕಾಯಿದೆ 1950ರ ಸೆಕ್ಷನ್‌ 2 ಮತ್ತು 3ರ ಇಂಡಿಯಾ ಹೆಸರು ಬಳಕೆಗೆ ನಿಷೇಧವಿದೆ” ಎಂದು ವಾದಿಸಿದರು.

ಮುಂದುವರಿದು, “ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆ ಉಲ್ಲೇಖಿಸಿ, ಈ ಇಬ್ಬರೂ ನಾಯಕರು ತಮ್ಮ ಒಕ್ಕೂಟಕ್ಕೆ ದೇಶದ ಹೆಸರು ನೀಡಿದ್ದಾರೆ. ಈ ಮೂಲಕ ಎನ್‌ಡಿಎ/ಬಿಜೆಪಿ ಮತ್ತು ಪ್ರಧಾನಮಂತ್ರಿ ಮೋದಿ ಅವರು ತಮ್ಮ ದೇಶದ ವಿರುದ್ದವೇ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಾರೆ” ಎಂದು ಆಕ್ಷೇಪಿಸಿದರು.

ಮುಂದಿನ ಲೋಕಸಭಾ ಚುನಾವಣೆಯು ಎನ್‌ಡಿಎ ಒಕ್ಕೂಟ ಮತ್ತು ದೇಶದ (ಇಂಡಿಯಾ) ನಡುವಿನ ಹೋರಾಟ ಎಂದು ರಾಹುಲ್‌ ಗಾಂಧಿ ಅವರು ಹೇಳಿದ್ದು, ಇದು ಸಾಮಾನ್ಯ ಜನರಲ್ಲಿ ಗೊಂದಲ ಉಂಟು ಮಾಡಿದೆ. ಈ ಸಂಬಂಧ ಭಾರತೀಯ ಚುನವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಆಯೋಗವು ಯಾವುದೇ ಕ್ರಮಕೈಗೊಳ್ಳದಿರುವುದರಿಂದ ನ್ಯಾಯಾಲಯದ ಕದತಟ್ಟಲಾಗಿದೆ ಎಂದು ಅರ್ಜಿದಾರರು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ