Mysore
19
overcast clouds
Light
Dark

Union Budget-2024: ಕೇವಲ ಒಂದು ಗಂಟೆಯಲ್ಲೇ ಬಜೆಟ್‌ ಮುಕ್ತಾಯ: ಇಲ್ಲಿವೆ ಪ್ರಮುಖಾಂಶಗಳು

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು (ಫೆ.01) ಲೋಕಸಭೆಯಲ್ಲಿ 2024-25ನೇ ಆರ್ಥಿಕ ವರ್ಷದ ಬಜೆಟ್ ಮಂಡಿಸಿದರು. ಕೇವಲ ಒಂದು ಗಂಟೆಯಲ್ಲಿಯೇ ಬಜೆಟ್‌ ಮಂಡಿಸಿದ್ದು ವಿಶೇಷವಾಗಿದೆ.

ಅತೀ ಕಡಿಮೆ ಅವಧಿಯಲ್ಲಿ ಬಜೆಟ್‌ ಮಂಡಿಸಿದ ಕೀರ್ತಿ ಅವರದ್ದಾಗಿದೆ. ಜೊತೆಗೆ ಅತಿ ದೊಡ್ಡ ಬಜೆಟ್ ಭಾಷಣದ ಹೆಗ್ಗಳಿಯೂ ಅವರದ್ದೇ ಆಗಿದೆ. 2020ರಲ್ಲಿ ಬರೋಬ್ಬರಿ 2 ಗಂಟೆ 45 ನಿಮಿಷಗಳ ದೀರ್ಘಕಾಲದ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್‌ ಅವರು. ಇಂದು ಮಂಡಿಸಿದ ಬಜೆಟ್‌ಗೆ ಕೇವಲ ಒಂದು ಗಂಟೆ ಮಾತ್ರ ಸಮಯವಾಕಾಶ ತೆಗೆದುಕೊಂಡರು.

ಈ ಬಜೆಟ್‌ನಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ತಮ್ಮ ಸರ್ಕಾರ ಶ್ರಮಿಸುತ್ತಿದೆ. ಸರ್ಕಾರದ ಯೋಜನೆಗಳಲ್ಲಿ ಯುವಕರು, ಮಹಿಳೆಯರು ಮತ್ತು ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈಲ್ವೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ, ಐಟಿ, ಸ್ಕಿಲ್‌ ಇಂಡಿಯಾ ಮಿಷನ್, ಮೆಟ್ರೊ ಮತ್ತು ನಮೋ ಭಾರತ್‌ ಯೋಜನೆಯಡಿ ರೈಲುಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಕ್ರಮಗಳ ಬಗ್ಗೆ ವಿಸ್ತಾರವಾಗಿ ಹೇಳಿದ್ದಾರೆ.

ಮಧ್ಯಂತರ ಬಜೆಟ್‌ನ​ ಪ್ರಮುಖಾಂಶಗಳು:

*ಪ್ರಧಾನ ಮಂತ್ರಿ ಆವಾಸ್ ಅಡಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ 70 ಪ್ರತಿಶತ ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ.
*2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ.
*ಸ್ಕಿಲ್ ಇಂಡಿಯಾ ಮಿಷನ್ 54 ಲಕ್ಷ ಯುವಕರಿಗೆ ತರಬೇತಿ ನೀಡಿದೆ. 7 ಐಐಟಿಗಳು, 16 ಟ್ರಪಲ್ ಐಟಿಗಳು ಮತ್ತು 390 ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ.
*ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ.
*ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಪ್ರಮಾಣದಲ್ಲಿ ಶೇ.3 ರಷ್ಟು ಹೆಚ್ಚಳವಾಗಿದೆ.
*2024-25ರ ಆರ್ಥಿಕ ವರ್ಷಕ್ಕೆ ತೆರಿಗೆ ಸಂಗ್ರಹ 26.02 ಟ್ರಿಲಿಯನ್ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ.
*ವಿತ್ತೀಯ ಕೊರತೆಯ ಮೇಲೆ ಹಿಡಿತ ಸಾಧಿಸಲಾಗಿದೆ.
*23-24ನೇ ಹಣಕಾಸು ವರ್ಷಕ್ಕೆ ಪರಿಷ್ಕೃತ ವಿತ್ತೀಯ ಕೊರತೆ ಶೇ 5.8 ನಿಗದಿಪಡಿಸಲಾಗಿದೆ.
*ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಿದೆ.
*ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
*ನಮ್ಮ ಸರ್ಕಾರ ಪ್ರತ್ಯೇಕ ಮತ್ಸ ಸಂಪದ ಯೋಜನೆ ಜಾರಿಗೊಳಿಸಿದೆ. ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ ವಿಸ್ತರಿಸಲಾಗುವುದು.
*ಜೈಜವಾನ್, ಜೈಕಿಸಾನ್, ಜೈವಿಜ್ಞಾನ, ಜೈ ಅನುಸಂಧಾನ ಎಂಬ ಪ್ರಧಾನಿ ಮೋದಿ ಅವರ ಘೋಷಣೆಯಡಿ ಕಾರ್ಯನಿರ್ವಹಿಸುತ್ತೇವೆ.
*ಪ್ರವಾಸೋದ್ಯಮಕ್ಕೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ