ಪ್ರಸ್ತುತ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೂಪರ್ ಸಿಕ್ಸ್ ಸುತ್ತಿಗೆ ಲೀಗ್ ಹಂತದ ಎಲ್ಲಾ ಪಂದ್ಯಗಳಲ್ಲಿಯೂ ಗೆಲ್ಲುವುದರ ಮೂಲಕ ಪ್ರವೇಶ ಪಡೆದುಕೊಂಡಿದ್ದು, ಇಂದು ( ಜನವರಿ 30 ) ನಡೆದ ಸೂಪರ್ ಸಿಕ್ಸ್ ಹಂತದ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 214 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಬ್ಲೋಮ್‌ಫಾಂಟೈನ್ ಮಾಂಗ್ವಾಂಗ್ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಮುಶೀರ್ ಖಾನ್ ಶತಕದ ನೆರವಿನಿಂದ 295 ರನ್ ಕಲೆಹಾಕಿ ಎದುರಾಳಿ ನ್ಯೂಜಿಲೆಂಡ್‌ಗೆ 296 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ದೊಡ್ಡ ಮಟ್ಟದಲ್ಲಿ ವಿಫಲವಾದ ನ್ಯೂಜಿಲೆಂಡ್ 28.1 ಓವರ್‌ಗಳಲ್ಲಿ 81 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರ ಆದರ್ಶ್ ಸಿಂಗ್ 52 ರನ್ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುಶೀರ್ ಖಾನ್ 131 ರನ್ ಬಾರಿಸಿದರು. ಇನ್ನುಳಿದಂತೆ ಅರ್ಶಿನ್ ಕುಲ್ಕರ್ಣಿ 9, ನಾಯಕ ಉದಯ್ ಸಹರಣ್ 34, ಅರವೆಳ್ಳಿ ಅವಿನಾಶ್ 17, ಪ್ರಿಯಾಂಶು ಮೊಲಿಯಾ 10, ಸಚಿನ್ ದಾಸ್ 15, ಮುರುಗನ್ ಅಭಿಷೇಕ್ 4, ನಮನ್ ತಿವಾರಿ ಅಜೇಯ 3 ಹಾಗೂ ರಾಜ್ ಲಿಂಬಾಣಿ ಅಜೇಯ 2 ರನ್ ಕಲೆಹಾಕಿದರು. ನ್ಯೂಜಿಲೆಂಡ್ ಪರ ಮೇಸನ್ ಕ್ಲಾರ್ಕ್ 4 ವಿಕೆಟ್, ರಾನ್ ಸೌಗರ್ಸ್, ಇವಾಲ್ಡ್ ಚ್ರ್ಯೂಡರ್, ಜಾಕ್ ಕಮ್ಮಿಂಗ್ ಹಾಗೂ ಒಲಿವರ್ ತೆವಾಟಿಯಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ನ್ಯೂಜಿಲೆಂಡ್ ಇನ್ನಿಂಗ್ಸ್: ಭಾರತದ ಬೌಲಿಂಗ್ ದಾಳಿಗೆ ತತ್ತಿರಿಸಿದ ನ್ಯೂಜಿಲೆಂಡ್ ಪರ ಯಾವೊಬ್ಬ ಆಟಗಾರ ಸಹ ಇಪ್ಪಂತರ ಗಡಿ ದಾಟಲಿಲ್ಲ. ಟಾಮ್ ಜೋನ್ಸ್ 0, ಜೇಮ್ಸ್ ನೆಲ್ಸನ್ 10, ಸ್ನೇಹಿತ್ ರೆಡ್ಡಿ ಡಕ್ಔಟ್, ಲಚ್ಲನ್ ಸ್ಟಾಕ್‌ಪೋಲ್ 5, ಆಸ್ಕರ್ ಜಾಕ್‌ಸನ್ 19, ಒಲಿವರ್ ತೆವಾಟಿಯಾ 7, ಜಾಕ್ ಕಮ್ಮಿಂಗ್ 16, ಅಲೆಕ್ಸ್ ಥಾಂಪ್ಸನ್ 12, ಇವಾಲ್ಡ್ ಚ್ರ್ಯೂಡರ್ 7, ರಾನ್ ಸೌಗರ್ಸ್ ಹಾಗೂ ಮೇಸನ್ ಕ್ಲಾರ್ಕ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಭಾರತದ ಪರ ಸೌಮಿ ಪಾಂಡೆ 4, ರಾಜ್ ಲಿಂಬಾಣಿ 2, ಮುಶೀರ್ ಖಾನ್ 2, ನಮನ್ ತಿವಾರಿ ಹಾಗೂ ಅರ್ಶಿನ್ ಕುಲ್ಕರ್ಣಿ ತಲಾ ಒಂದೊಂದು ವಿಕೆಟ್ ಪಡೆದರು.