ಉಡುಪಿ : ಉಡುಪಿಯ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ವಾಶ್ ರೂಮ್‌ನಲ್ಲಿ ವಿದ್ಯಾರ್ಥಿನಿಯೊಬ್ಬರ ವಿಡಿಯೋ ಚಿತ್ರೀಕರಣ ನಡೆಸಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಈಗ ರಾಷ್ಟ್ರೀಯ ಮಹಿಳಾ ಆಯೋಗ ಮಧ್ಯಪ್ರವೇಶಿಸಿದ್ದು, ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದೆ. ಖುಷ್ಬು ಸುಂದರ್ ನೇತೃತ್ವದ ಮಹಿಳಾ ಆಯೋಗದ ತಂಡ ನಗರಕ್ಕೆ ಭೇಟಿ ನೀಡಲಿದೆ.
ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಟ್ವೀಟ್ ಮಾಡಿದ್ದು, ಈ ಪ್ರಕರಣವನ್ನು ನಾವು ಪರಿಗಣಿಸಿದ್ದೇವೆ. ಮಹಿಳಾ ಆಯೋಗದ ದಕ್ಷಿಣ ಭಾರತದ ಸದಸ್ಯೆ ಖುಷ್ಬು ಸುಂದರ್ ಅವರು ಉಡುಪಿಗೆ ತೆರಳಿ ತನಿಖೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರೇಖಾ ಶರ್ಮಾ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಟ್ವೀಟ್‌ನಲ್ಲಿ, ಉಡುಪಿಯ ಘಟನೆ ತುಂಬಾ ಸಾಮಾನ್ಯವಾದದ್ದು, ಸರಳವಾದದ್ದಲ್ಲ ಅಥವಾ ಕಣ್ತಪ್ಪಿನಿಂದ ಆಗಿಲ್ಲ. ವಾಶ್ ರೂಂನಲ್ಲಿ ಹಿಂದೂ ಹುಡುಗಿಯ ವಿಡಿಯೋ ರೆಕಾರ್ಡ್ ಮಾಡಿ, ಅದನ್ನು ಮುಸ್ಲಿಂ ಹುಡುಗರೊಂದಿಗೆ ಹಂಚಿಕೊಂಡಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿ ಆ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಅದಕ್ಕೆ 3 ಮುಸ್ಲಿಂ ಹುಡುಗಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಿದ್ದು, ಪ್ರಕರಣ ದಾಖಲಿಸಲಾಗಿದೆ. ಇದು ಹಿಂದೂ ಹುಡುಗಿಯರ ವಿರುದ್ಧ ನಡೆದ ಪೂರ್ವ ನಿಯೋಜಿತ ಕೃತ್ಯವೇ? ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಬೇಕು ಮತ್ತು ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು.
We have taken it up. Member @khushsundar is going for an inquiry today. https://t.co/x1VXBdfmc9
— Rekha Sharma (@sharmarekha) July 26, 2023