ಮೈಸೂರು : ಮೀನಾಕ್ಷಿಪುರ ಕಾವೇರಿ ಹಿನ್ನೀರಿನಲ್ಲಿ ಈಜಲು ಹೋದ ಮೂವರು ಯುವಕರು ನಾಪತ್ತೆಯಾದ ಘಟನೆ ನಡೆದಿದ್ದು, ಅದರಲ್ಲಿ ಓರ್ವನ ಶವ ಪತ್ತೆಯಾಗಿದೆ. ಇನ್ನುಳಿದ ಇಬ್ಬರಿಗಾಗಿ ಹುಡುಕಾಟ ನಡೆದಿದೆ.
ಭರತ್(20), ಪ್ರವೀಣ್(20), ವರುಣ್(20) ನಾಪತ್ತೆಯಾದ ಯುವಕರು. ಮೂವರು ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದರು. ಒಟ್ಟು 5 ಜನ ಸ್ನೇಹಿತರು ಕಾವೇರಿ ಹಿನ್ನೀರಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ನಾಪತ್ತೆಯಾಗಿದ್ದರು.
ಇದೀಗ ಭರತ್ ಶವ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಈ ಕುರಿತು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





