ನವದೆಹಲಿ : ಅಪಘಾತ ನಡೆದಮಾರ್ಗದಲ್ಲಿ ಒಂದು ವೇಳೆ ಕವಚ್ ಸಕ್ರಿಯವಾಗಿದ್ದರೂ ಮೂರು ರೈಲು ದುರಂತವನ್ನು ತಪ್ಪಿಸಲು ಸಾಧ್ಯವಿರಲಿಲ್ಲ ಎಂದು ರೈಲು ಮಂಡಳಿಯ ಸದಸ್ಯೆ ಜಯ ವರ್ಮ ಸಿನ್ಹಾ ಹೇಳಿದ್ದಾರೆ.
ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ ಮಾರ್ಗದಲ್ಲಿ ಕವಚ್ ವ್ಯವಸ್ಥೆ ಇರಲಿಲ್ಲ ಎಂಬ ಆರೋಪ ಸಂಬಂಧಿಸಿದಂತೆ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯಾಪಾರ ಅಭಿವೃದ್ಧಿ ಸದಸ್ಯೆ ಜಯ ವರ್ಮ ಸಿನ್ಹಾ ಮಾತನಾಡಿ, ವೇಗವಾಗಿ ಚಲಿಸುವ ವಾಹನದ ಮುಂದೆ ಇದ್ದಕ್ಕಿದ್ದಂತೆ ಅಡಚಣೆ ಸೃಷ್ಟಿಯಾದರೆ ಪ್ರಪಂಚದ ಯಾವುದೇ ತಂತ್ರಜ್ಞಾನವು ಆ ಅಪಘಾತವನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಾಥಮಿಕ ತನಿಖೆಯಲ್ಲಿ ಸಿಗ್ನಲಿಂಗ್‌ನಲ್ಲಿ ದೋಷ ಪತ್ತೆಯಾಗಿರುವುದು ತಿಳಿದು ಬಂದಿದೆ. ರೈಲ್ವೇ ಸುರಕ್ಷತಾ ಆಯುಕ್ತರ ವಿವರವಾದ ವರದಿಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ ಎಂದು ಹೇಳಿದರು.
ಗೂಡ್ಸ್ ರೈಲು ಹಳಿ ತಪ್ಪಿರಲಿಲ್ಲ. ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್ ಬೋಗಿಗಳು ಇನ್ನೊಂದು ಮುಖ್ಯ ಹಳಿ ಮೇಲೆ ಬಿದ್ದ ಪರಿಣಾಮ ಗರಿಷ್ಠ ಮಟ್ಟದ ಸಾವು ನೋವು ಸಂಭವಿಸಿದೆ. ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಳಿತಪ್ಪಿದ ಬೋಗಿಗಳು ಗಂಟೆಗೆ 126 ಕಿ.ಮೀ ವೇಗದಲ್ಲಿ ಬರುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಮಯದಲ್ಲಿ ಉಂಟಾದ ಬದಲಾವಣೆಯಿಂದ ಅಪಘಾತ ಸಂಭವಿಸಿರುವುದು ತಿಳಿದು ಬಂದಿದೆ. ಈ ಬದಲಾವಣೆಯನ್ನು ಯಾರು ಮಾಡಿದ್ದಾರೆ ಮತ್ತು ಅದು ಹೇಗೆ ಸಂಭವಿಸಿತು ಎಂಬುದನ್ನು ಸರಿಯಾದ ತನಿಖೆಯ ನಂತರ ಕಂಡುಹಿಡಿಯಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ಅಪಘಾತ ಹೇಗಾಯಿತು ? : ಒಡಿಶಾ ಬಾಲಸೋರ್‌ನ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ 4 ಹಳಿಗಳು ಇವೆ. ಈ ಪೈಕಿ ಎರಡು ಮುಖ್ಯ ಅಥವಾ ಮೇನ್ ಹಳಿಗಳು ಆಗಿದ್ದರೆ ಇನ್ನು ಎರಡು ಲೂಪ್ ಹಳಿಗಳು. ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದೇ ಇರಲು ಗೂಡ್ಸ್ ರೈಲುಗಳನ್ನು ನಿಲ್ದಾಣದ ಲೂಪ್ ಲೈನಿನಲ್ಲಿ ನಿಲ್ಲಿಸಿರುತ್ತಾರೆ. ಅದೇ ರೀತಿಯಾಗಿ ಒಂದು ಹಳಿಯಲ್ಲಿ ಗೂಡ್ಸ್ ರೈಲನ್ನು ನಿಲ್ಲಿಸಲಾಗಿತ್ತು. ಸಂಜೆಯ ವೇಳೆ ವೇಗವಾಗಿ ಬರುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿ ತಪ್ಪಿದೆ. ಈ ರೈಲು ಹಳಿ ತಪ್ಪುವ ಸಮಯದಲ್ಲೇ ಇನ್ನೊಂದು ಕಡೆಯಿಂದ ಬೆಂಗಳೂರಿನಿಂದ ಹೌರಾಗೆ ಹೊರಟಿದ್ದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬಂದಿದೆ. ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಯಶವಂತಪುರದಿಂದ ಹೊರಟಿದ್ದ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ.