Mysore
17
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಮೈಸೂರಲ್ಲಿ ಯದುವಂಶಸ್ಥರ ದತ್ತು ಪುತ್ರ v/s ಸಾಮಾನ್ಯ ಪ್ರಜೆ ನಡುವೆ ಚುನಾವಣೆ: ಎಂ. ಲಕ್ಷ್ಮಣ್‌

ಮೈಸೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಯದುವಂಶಸ್ಥರ ದತ್ತುಪುತ್ರ ಹಾಗೂ ಸಾಮಾನ್ಯ ಪ್ರಜೆಯ ನಡುವೆ ಚುನಾವಣೆ ನಡೆಯಲಿದೆ ಎಂದು ಎಂ. ಲಕ್ಷ್ಮಣ್‌ ಹೇಳಿದರು.

ಮೈಸೂರು ಕೊಡಗು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ದೇಶದಲ್ಲೇ ಮೊದಲ ಬಾರಿಗೆ ಎಲ್ಲಾ ಸಮುದಾಯಗಳಿಗೆ ಮೀಸಲಾತಿ ನೀಡಿ, ನ್ಯಾಯ ಸಿಗಲು ಶ್ರಮಿಸಿದ್ದು ಮೈಸೂರಿನ ರಾಜಮನೆತನದ ನಾಲ್ವಡಿ ಶ್ರೀ ಅವರು, ಆದರೆ ಇಂದು ಅದೇ ಮೀಸಲಾತಿ ರದ್ದುಗೊಳಿಸಿ, ಜನ ಸಾಮಾನ್ಯರನ್ನು ಶೋಷಿತರನ್ನಾಗಿ ಮಾಡುವ ಪಕ್ಷಕ್ಕೆ ಯದುವೀರ್‌ ಸೇರಿರುವುದು ಬೇಸರದ ಸಂಗತಿ. ರಾಜರು ನಮ್ಮ ಪಕ್ಷವನ್ನು ಅಪ್ರೋಚ್‌ ಮಾಡಿದ್ದರೇ ಖಂಡಿತ ಟಿಕೆಟ್‌ ಸಿಗುತ್ತಿತ್ತು ಎಂದರು.

ಮುಂದುವರಿದು, ಜನ ಸಾಮಾನ್ಯರ ಮನೆ ಕಾಯುವವನು ನಾನು. ಇನ್ನೊಬ್ಬರ ಮನೆ ಮುಂದೆ ಹೋಗಿ ಅವರ ಮನೆ ಕಾಯುವ ಕಾಯಕ ಬೇಕಾ? ಇದನ್ನು ಮತದಾರರು ಚಿಂತಿಸಬೇಕಾಗಿದೆ ಎಂದು ಮನವಿ ಮಾಡಿದರು.

ಪ್ರತಾಪ್ ಸಿಂಹ ಹತಾಶರಾಗಿದ್ದಾರೆ:

ವಯಕ್ತಿಕವಾಗಿ ನನಗೆ ಪ್ರತಾಪ್‌ ಸಿಂಹ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಹೆಚ್ಚು ಸುಳ್ಳು ಹೇಳುವ ಪ್ರತಾಪ್‌ ಅವರನ್ನು ನಾನು ರಾಜಕೀಯವಾಗಿ ವಿರೋಧಿಸುತ್ತೇನೆ ಎಂದರು.

ಈ ಬಾರಿಯೂ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತೆ ಅಂತ ಅಂದುಕೊಂಡಿದ್ದೆ. ಆದ್ರೆ ಪ್ರತಾಪ್ ಸಿಂಹ ಅವರಾಗಿ ಅವರೇ ಔಟ್ ಆಗಿಬಿಟ್ರು. ಗ್ರಾ.ಪಂ ಚುನಾವಣೆಯನ್ನು ಗೆಲ್ಲದವನ ಬಳಿ ಮಾತನಾಡುವುದಿಲ್ಲ ಎಂದಿದ್ದಿರಿ ಈಗ ನಮಗೆ ಟಿಕೆಟ್‌ ಇಲ್ಲ ಎಂದು ವ್ಯಂಗ್ಯವಾಡಿದರು.

ಮೋದಿ ಹೆಸರಿನಿಂದ ಎಲ್ಲಾ ಕೆಲಸ ಮಾಡಿದ್ದಾಗಿ ಹೇಳುತ್ತಿದ್ದ ಅವರು ಟಿಕೆಟ್‌ ಮಿಸ್‌ ಆದ ಬಳಿಕ ನಾನು, ನಾನು ಎನ್ನುತ್ತಿದ್ದಾರೆ. ಪಾಪಾ ಹತಾಶರಾದ ಪ್ರತಾಪ್‌ ಸಿಂಹ ಏನೇನೋ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡದೇ ಇರುವಂತೆ ಹೈಕೋರ್ಟ್‌ ನಿಂದ ಸ್ಟೇ ತಂದಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕಿಚಾಯಿಸಿದರು.

ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದು ಯಾಕೆ? ಕಾರಣ ಏನು ಅಂತ ಬಿಜೆಪಿಯವರು ಹೇಳಬೇಕು. ಇಲ್ಲಾ ಏನು ಕಾರಣದಿಂದಾಗಿ ಟಿಕೆಟ್‌ ಕೈ ತಪ್ಪಿ ಹೋಯಿತು ಎಂಬ ಬಗ್ಗೆ ಸ್ವತಃ ಸಿಂಹ ಅವರೇ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪ್ರಭಾವ ಕುರಿತಂತೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಈ ಕ್ಷೇತ್ರದಲ್ಲಿ ಮನೆಯೊಂದು ಆರು ಬಾಗಿಲು ಎಂದಾಗಿದೆ. ಇನ್ನು ಜೆಡಿಎಸ್‌ ತನ್ನ ಅಸ್ಥತ್ವವನ್ನೇ ಕಳೆದುಕೊಂಡಿದೆ. ಜೆಡಿಎಸ್‌ಗೆ ಬಿಜೆಪಿ ನಂಬಿಸಿ ಕತ್ತು ಕುಯ್ದಿದಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಬಜೆಪಿಗೆ ನಂಬಿಕೆಯಿಲ್ಲ. ಮತ್ತು ಒಕ್ಕಲಿಗರನ್ನು ಗಣನೀಯವಾಗಿ ಕಡೆಗಣಿಸಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಸೇರಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Tags:
error: Content is protected !!