ಬೆಂಗಳೂರು : ಲೋಕಸಭಾ ಚುನಾವಣೆ ಭಯದಿಂದ ಆಪರೇಷನ್ ಹಸ್ತ ಶುರು ಮಾಡಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಕೊರತೆ ಇತ್ತು. ಈ ಸರ್ಕಾರದಲ್ಲಿ ಕೊರತೆಯಿಲ್ಲ. ಬಹುಮತವಿದೆ ಆದರೂ ಆಪರೇಷನ್ ಹಸ್ತ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆ ನಂತರ ಮತ್ತೆ ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಸರ್ಕಾರ ಉಳಿಯಲ್ಲ ಅಂತ ಗೊತ್ತಿದೆ. ಅದಕ್ಕೆ ಅವರಿಗೆ ಭಯ ಶುರುವಾಗಿದೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ತಪ್ಪು ಅಂದರೆ 10,20,30 ಪರ್ಸೆಂಟ್ ಇರಬಹುದು. ಇಲ್ಲವೆ ಶೇ.40, ಶೇ.50ರಷ್ಟಿರಬಹುದು. ಆದರೆ, ತನಿಖೆ ನೆಪದಲ್ಲಿ ಎಲ್ಲಾ ಕೆಲಸ ನಿಲ್ಲಿಸಿದ್ದಾರೆ. ತಪ್ಪು ಮಾಡಿದ್ದರೆ ಜೈಲಿಗೆ ಹಾಕಿ. ರಾಜ್ಯದಲ್ಲಿರುವ ಎಲ್ಲ ಎಂಜಿನಿಯರ್ ಗಳು ಕಳ್ಳರು ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ನೂರು ದಿನ ಪೂರ್ಣ ಮಾಡಿರುವದನ್ನು ಸರ್ಕಾರದ ಕರಾಳ ದಿನ ಅನ್ನಬಹುದು. ರೋಡ್ ಆಗಿಲ್ಲ, ಕುಡಿಯುವ ನೀರು ಕೊಟ್ಟಿಲ್ಲ. ಲೋಕೋಪಯೋಗಿ ಇಲಾಖೆಯ ಒಂದೇ ಒಂದು ಕೆಲಸ ಆಗಿಲ್ಲ. ಎಲ್ಲಾ ಕಡೆ ಬಿಲ್ ಕೊಟ್ಟಿಲ್ಲ. ಎಲ್ಲಾ ಕಡೆ ಕಂಟ್ರ್ಯಾಕ್ಟರ್ ಕೆಲಸ ನಿಲ್ಲಿಸಿದ್ದಾರೆ.100 ದಿನಗಳಲ್ಲಿ ಕೆಲಸ ಕುಂಟಿತವಾಗಿದೆ. ಒಂದೇ ಒಂದು ಕೆಲಸ ಆಗಿಲ್ಲ ಎಂದು ಆರೋಪಿಸಿದರು.
ನಮ್ಮ ಸರ್ಕಾರದ ಕೆಲಸ ಎಷ್ಟು ಆಗಿತ್ತೋ ಅಷ್ಟಿದೆ. ದಿನ ನಿತ್ಯ ಉಚಿತ ಉಚಿತ ಅಂತಾರೆ. ಆದರೆ ಜನರಿಗೆ ಬೇಕಾಗಿರೋದು ಅಭಿವೃದ್ಧಿ. ಬೆಂಗಳೂರಿನಲ್ಲೇ ವಿದ್ಯುತ್ ಲೋಡ್ ಶೆಡ್ಡಿಂಗ್ ಇದೆ. ಎಲ್ಲೂ ಅಭಿವೃದ್ಧಿ ಕುರಿತ ಹೇಳಿಕೆ ಇಲ್ಲ. ಸರ್ಕಾರದಲ್ಲಿ ನಯಾ ಪೈಸೆ ಇಲ್ಲ. ಬಿಲ್ ಕೊಡೋಕೆ ಅವರಿಗೆ ಹಣವಿಲ್ಲ ಎಂದು ಟೀಕಿಸಿದರು.
ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಜೊತೆ ನಾನೇ ಮಾತನಾಡಿದ್ದೇನೆ. ಅವರು ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ. ನಮ್ಮವರು ಪಕ್ಷ ಬಿಟ್ಟು ಹೋಗಲ್ಲ. ಯಾರಿಗೆ ಪಕ್ಷ ನಿಷ್ಠೆ ಇದೆಯೋ ಅವರು ಇರುತ್ತಾರೆ. ಯಾರಿಗೆ ಪಕ್ಷ ನಿಷ್ಠೆ ಇಲ್ಲ ಅವರು ಹೋಗುತ್ತಾರೆ. ಸರ್ಕಾರದ ಕೆಲಸ ಅಂದರೆ ಸಭೆ ಮಾಡಬೇಕಾಗುತ್ತದೆ. ಅದಕ್ಕೆ ಆಪಕ್ಷ ಈ ಪಕ್ಷ ಅಂತ ಇಲ್ಲ ಎಂದು ಅವರು ಹೇಳಿದರು.