Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳಿವು!

ಭೋಪಾಲ್‌ : ಆಡಳಿತ ವಿರೋದಿ ಅಲೆ, ಕಾಂಗ್ರೆಸ್‌ ಗ್ಯಾರೆಂಟಿ ಇದು ಯಾವುದು ಕೂಡಾ ಬಿಜೆಪಿಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಮಧ್ಯಪ್ರದೇಶದಲ್ಲಿ ಬಹುತೇಕ ಬಿಜೆಪಿ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದೆ. ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿಯೇ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದು, ಮತ್ತಷ್ಟು ಶಕ್ತಿ ದೊರೆತಂತಾಗಿದೆ.

2003ರಿಂದಲೂ ಮಧ್ಯಪ್ರದೇಶದಲ್ಲಿ ಬಿಜೆಪಿ ತನ್ನ ಪಾರುಪತ್ಯ ಮೆರೆದಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಮಧ್ಯಪ್ರದೇಶ ಬಿಜೆಪಿ ಪ್ರಾಬಲ್ಯದ ನೆಲ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದು ಕಷ್ಟ ಎಂದೇ ಹೇಳಲಾಗುತ್ತಿತ್ತು. ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ ಎಕ್ಸಿಟ್ ಪೋಲ್‌ನ ಬಹುತೇಕ ಫಲಿತಾಂಶ ಅದನ್ನೇ ಹೇಳಿತ್ತು. ಆದರೆ ಈ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ. ಬಿಜೆಪಿಯ ಭರ್ಜರಿ ಗೆಲುವಿಗೆ ಕಾರಣಗಳೇನು? ಬಿಜೆಪಿ ಪಕ್ಷದ ಕೈ ಹಿಡಿಯಲು ಮತದಾರನ ಮೇಲೆ ಪ್ರಭಾವ ಬೀರಿದ ಅಂಶಗಳಾವುವು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಸ್ಟಾರ್‌ ಕ್ಯಾಂಪೈನ್‌ : ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಧ್ಯಪ್ರದೇಶ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್, ಸಹ ಉಸ್ತುವಾರಿ ಅಶ್ವಿನಿ ವೈಷ್ಣವ್ ಅವರ ಚುನಾವಣಾ ತಂತ್ರ ಮತ್ತು ಬಿರುಸಿನ ಪ್ರಚಾರದ ನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಪ್ರಮುಖ ಕಾರಣವಾಗಿದೆ. ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬೀಳುವ ಕೊನೆಯ 10 ದಿನಗಳಲ್ಲಿ ಮೋದಿ ಅವರು 15 ಸಮಾವೇಶಗಳಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ 350 ರ್ಯಾಲಿ ನಡೆಸದರೆ, ಬಿಜೆಪಿ 634 ರ್ಯಾಲಿಗಳನ್ನು ನಡೆಸಿದ್ದರು. ಅಮಿತ್ ಶಾ 21, ಜೆಪಿ ನಡ್ಡಾ 14, ರಾಜನಾಥ್ ಸಿಂಗ್ 12 ಕಡೆ ಸಭೆಗಳಲ್ಲಿ ಭಾಗಿಯಾಗಿದ್ದರು. ಇದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಯಿತು.

ʼಲಾಡ್ಲಿ ಬೆಹ್ನಾʼ ಮಹಿಳಾ ಸಬಲೀಕರಣ ಯೋಜನೆ : ಬಿಜೆಪಿ ಸರ್ಕಾರವು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಲಾಡ್ಲಿ ಬೆಹ್ನಾ ಯೋಜನೆಯನ್ನು ಪ್ರಾರಂಭಿಸಿತು. ಇದರಡಿ 1.31 ಕೋಟಿ ಮಹಿಳೆಯರಿಗೆ ಆರಂಭದಲ್ಲಿ 1000 ರೂಪಾಯಿ ಹಾಗೂ ನಂತರ 1250 ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ. ಅದನ್ನು 3 ಸಾವಿರ ರೂ.ಗೆ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಇದಲ್ಲದೇ ರೈತರಿಗೆ ಗೋಧಿ, ಭತ್ತದ ಬೆಂಬಲ ಬೆಲೆ ಹೆಚ್ಚಿಸಿ ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದಲ್ಲದೇ ಕೇಂದ್ರ ಸರ್ಕಾರದ ಉಚಿತ ಪಡಿತರ, ಪ್ರಧಾನಮಂತ್ರಿ ಆವಾಸ್​ ಯೋಜನೆಯಿಂದ ತೊಡಗಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಗಳು ಬಿಜೆಪಿಗೆ ವರದಾನವಾಯಿತು.

ಹಿರಿಯರಿಗೆ ಮತ್ತೆ ಮಣೆ : ಕರ್ನಾಟಕದಲ್ಲಿ ಬಿಜೆಪಿ ಹಲವಾರು ಹಿರಿಯ ನಾಯಕರಿಗೆ ಕೋಕ್‌ ಕೊಟ್ಟು ಹೊಸ ಮುಖಗಳಿಗೆ ಮಣೆ ಹಾಕಿದ್ದು, ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆದರೆ ಮಧ್ಯಪ್ರದೇಶದಲ್ಲಿ ಈ ತಪ್ಪು ಮಾಡದ ಬಿಜೆಪಿ ಹಿರಿಯರನ್ನೇ ಕಣಕ್ಕಿಳಿಸಿ ಗೆಲುವು ಸಾಧಿಸಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬದಲಿಸಲಾಗುತ್ತದೆ ಎಂಬ ಸುದ್ದಿ ಜೂನ್ ತಿಂಗಳಲ್ಲಿಯೇ ಹರಿದಾಡಿತ್ತು. ಬಿಜೆಪಿ ವಿರೋಧಿ ಅಲೆ ನಡುವೆಯೇ ಚೌಹಾಣ್ ಮಾತ್ರವಲ್ಲದೆ, ಇನ್ನೂ ಕೆಲವು ಹಿರಿಯ ನಾಯಕರನ್ನು ಬಿಜೆಪಿ ಈ ಬಾರಿ ಒತ್ತಾಯಪೂರ್ವಕವಾಗಿಯೇ ಕಣಕ್ಕಿಳಿಸಿತ್ತು. ಅನುಭವಿಗಳ ಪ್ರಭಾವಳಿ ಬಿಜೆಪಿಗೆ ಲಾಭವಾಯಿತು.

ಆಡಳಿತ ವಿರೋಧಿ ಅಲೆ ಕೊನೆಗಾಣಿಸಲು ಹೆಣೆದ ತಂತ್ರ : ರಾಜ್ಯದಲ್ಲಿ 18 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಕೊನೆಗಾಣಿಸಲು ಬಿಜೆಪಿ ರಣತಂತ್ರ ಹೆಣೆದಿತ್ತು. ಇದಕ್ಕಾಗಿಯೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಬಿಜೆಪಿ ಬಹಿರಂಗಪಡಿಸಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಆಡಳಿತವನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸಲಾಯಿತು. ಅನುಭವಿ ನಾಯಕರಿಗೆ ತಮ್ಮ ಕ್ಷೇತ್ರಗಳ ಜೊತೆಗೆ ಇತರ ಕ್ಷೇತ್ರಗಳನ್ನೂ ಗೆಲ್ಲಿಸಿಕೊಂಡು ಬರುವ ಹೊಣೆ ವಹಿಸಲಾಗಿತ್ತು.

ಡಬಲ್‌ ಇಂಜಿನ್‌ ಸರ್ಕಾರ ಕರಾಮತ್ತು : ರಾಜ್ಯ ಮತ್ತು ಕೇಂದ್ರದ ನಾಯಕರ ‘ಡಬಲ್ ಎಂಜಿನ್’ ಸರ್ಕಾರದ ಮಂತ್ರ ಯಶಸ್ಸಿಗೆ ಕಾರಣವಾಯಿತು. ಕರ್ನಾಟಕದಲ್ಲಿ ಇದು ಕೈಕೂಡದೆ ಇದ್ದರೂ, ಮಧ್ಯಪ್ರದೇಶದಲ್ಲಿ ಕೈ ಹಿಡಿದಿದೆ. ರಾಜ್ಯದ ಸಭಿವೃದ್ಧ ಇನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರುವುದು ಉತ್ತಮ ಎಂದು ಭಾವಿಸಿದ್ದು, ಮತ್ತು ಕಳೆದ 9 ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಅವುಗಳ ಮಾಹಿತಿ ನೀಡುವುದು ಮುಖ್ಯ ಉದ್ದೇಶವಾಗಿತ್ತು.

ಅಮಿತ್​ ಶಾ ತಂತ್ರಗಾರಿಕೆ : ಚುನವಾಣಾ ಆಖಾಡಕ್ಕೆ ಖುದ್ದು ಅಮಿತ್‌ ಶಾ ಎಂಟ್ರಿ ಕೊಟ್ಟಿದ್ದು, ಅರಣ್ಯ ಸಚಿವ ಭೂಪೇಂದ್ರ, ರೈಲ್ವೆ ಉಸ್ತುವಾರಿ ಸಚಿವ ಅಶ್ವಿನಿ ಅವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿದರು. ಆ ಮೂಲಕ ಸಿಟ್ಟಿಗೆದ್ದ ಅತೃಪ್ತ ಕಾರ್ಯಕರ್ತರನ್ನು ಒಗ್ಗೂಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಬಿರುಸಿನ ಪ್ರಚಾರ ನಡೆಸಿದರು.

ಬುಡಕಟ್ಟು ಮತದಾರರನ್ನು ತಲುಪುವ ಪ್ರಯತ್ನ ಯಶಸ್ವಿ : ಬುಡಕಟ್ಟು ಜನರನ್ನು ತಲುಪಲು ಪೆಸಾ ಕಾಯ್ದೆ ಯೋಜನೆ, ಮಧ್ಯಪ್ರದೇಶದಲ್ಲಿ ಬುಡಕಟ್ಟು ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ, ಜಬಲ್ಪುರದಲ್ಲಿ ನಡೆದ ರಾಜಾ ಶಂಕರ್ ಶಾ ಮತ್ತು ವಿಜಯ್ ಶಾ ಅವರ ಹುತಾತ್ಮ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ, ಪ್ರಧಾನಿ ಮೋದಿಯಿಂದ ಪರಿಶಿಷ್ಟ ಜಾತಿ ವರ್ಗದ ಕಲ್ಯಾಣಕ್ಕಾಗಿ ಸಾಗರದಲ್ಲಿ ಸಂತ ರವಿದಾಸ್ ದೇವಾಲಯದ ಶಂಕುಸ್ಥಾಪನೆ ಇವೆಲ್ಲವು ಎಲ್ಲಾ ವರ್ಗದ ಜನರನ್ನು ಸೆಳೆಯಲು ಕಾರಣವಾಯಿತು.

ಸನಾತನ, ರಾಮಮಂದಿರ ವಿವಾದಗಳ ಸಮರ್ಥ ಬಳಕೆ : ಇಂಡಿಯಾ ಮೈತ್ರಿಕೂಟದ ಸದಸ್ಯ ಉದಯ್‌ನಿಧಿ ಸ್ಟಾಲಿನ್‌ ಅವರ ಸನಾತನ ಧರ್ಮ ಹೇಳಿಕೆಯನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿತು. ರಾಮಮಂದಿರ ಬಗ್ಗೆ ಕಾಂಗ್ರೆಸ್‌ ನೀಡುವ ದೂರನ್ನು ಹಿಂದೂ ವಿರೋಧಿ ಅಲೆಯನ್ನಾಗಿ ಪರಿವರ್ತಿಸಲಾಯಿತು. ಇದು ಬಿಜೆಪಿ ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ