Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಇರುವುದೊಂದೇ ಸನಾತನ ಧರ್ಮ ಉಳಿದೆಲ್ಲವೂ ಪಂಥಗಳು : ಯೋಗಿ ಆದಿತ್ಯನಾಥ್

ಲಕ್ನೋ : ಧರ್ಮ ಇರುವುದೊಂದೇ, ಅದುವೇ ಸನಾತನ ಧರ್ಮ. ಉಳಿದೆಲ್ಲವೂ ಪಂಥಗಳು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ.

ಗೋರಖ್‌ಪುರದಲ್ಲಿ ನಡೆದ ಶ್ರೀಮದ್ ಭಾಗವತ ಕಥಾ ಜ್ಞಾನ ಯಾಗ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಸನಾತನ ಧರ್ಮವೊಂದೇ ಧರ್ಮ. ಉಳಿದದ್ದು ಎಲ್ಲಾ ಪಂಥಗಳು ಮತ್ತು ಆರಾಧನಾ ವಿಧಾನಗಳು. ಸನಾತನ ಧರ್ಮ ಮಾನವೀಯತೆಯ ಧರ್ಮವಾಗಿದ್ದು, ಅದರ ಮೇಲೆ ದಾಳಿ ನಡೆಸಿದರೆ ಇಡೀ ವಿಶ್ವದ ಮಾನವೀಯತೆ ತೊಂದರೆಗೆ ಒಳಗಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀಮದ್ ಭಾಗವತ್ ಸಾರವನ್ನು ನಿಜವಾಗಿಯೂ ಗ್ರಹಿಸಲು ಮುಕ್ತ ಮನಸ್ಥಿತಿಯನ್ನು ಹೊಂದಿರಬೇಕು. ಸಂಕುಚಿತ ಮನಸ್ಸಿನ ದೃಷ್ಟಿಕೋನಗಳು ಅದರ ಬೋಧನೆಗಳ ವಿಶಾಲತೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕಳೆದ ತಿಂಗಳು ತಮಿಳುನಾಡಿನ ಸಚಿವ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ ಎಂಬ ಹೇಳಿಕೆಯನ್ನು ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ದೇಶಾದ್ಯಂತ ಬಾರೀ ಚರ್ಚೆಗೂ ಈ ವಿಚಾರ ಗ್ರಾಸವಾಯಿತು. ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು ಸನಾತನ ಧರ್ಮದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಅದನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ