ಬೆಂಗಳೂರು : ರಾಜ್ಯ ಸರಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ರಚಿಸಲಾಗಿದ್ದ 7ನೆ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು 2024ರ ಮಾ.15ರ ವರೆಗೆ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.
2022ರ ನ.19ರಂದು 7ನೆ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿತ್ತು. ನಂತರ 2023ರ ಮೇ 15ರಂದು ವೇತನ ಆಯೋಗದ ಕಾಲಾವಧಿಯನ್ನು ವಿಸ್ತರಿಸಲಾಗಿತ್ತು. ಅದರಂತೆ, ವೇತನ ಆಯೋಗದ ಕಾಲಾವಧಿಯು ಇದೇ ನ.18ಕ್ಕೆ ಕೊನೆಗೊಳ್ಳುತ್ತಿತ್ತು.
ವೇತನ ಆಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ 2024ರ ಮಾ.15ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಆರ್ಥಿಕ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿ ಉಮಾ ಕೆ.ಆದೇಶದಲ್ಲಿ ತಿಳಿಸಿದ್ದಾರೆ.