ನವದೆಹಲಿ : ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ಮೂರು ರೈಲುಗಳ ನಡುವಿನ ಅಪಘಾತಕ್ಕೆ ಏನು ಕಾರಣ ಹಾಗೂ ಕಾರಣಕರ್ತರು ಯಾರೆಂಬುದನ್ನು ಪತ್ತೆಹಚ್ಚಲಾಗಿದ್ದು, ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಎರಡು ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲು ನಡುವೆ ಸಂಭವಿಸಿದ ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದು, 1,100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಿದ್ದು, ಘಟನೆಗೆ ಕಾರಣ ಹಾಗೂ ಈ ಅವಘಡಕ್ಕೆ ಕಾರಣರಾದವರನ್ನು ಗುರುತಿಸಿದ್ದಾರೆ. ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ನಲ್ಲಿರುವ ಬದಲಾವಣೆಯಿಂದ ಇದು ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಇದೀಗ ದುರಸ್ತಿ ಕಾರ್ಯದ ಕಡೆಗೆ ಸಚಿವರು ಹೆಚ್ಚಿನ ಗಮನಹರಿಸಿದ್ದಾರೆ. ಜೂನ್ 7ರ ಹೊತ್ತಿಗೆ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸ್ಥಳ ಪರಿಶೀಲನೆ ನಡೆಸಿದರು, ಮೃತದೇಹಗಳನ್ನು ಸಾಗಿಸುವ ಕೆಲಸಗಳು ಪೂರ್ಣಗೊಂಡಿದೆ. ಬುಧವಾರದಷ್ಟೊತ್ತಿಗೆ ಮರುಸ್ಥಾಪನೆ ಕಾರ್ಯ ಪೂರ್ಣಗೊಳ್ಳಲಿದ್ದು, ರೈಲು ಎಂದಿನಂತೆ ಸಂಚರಿಸಬಹುದು ಎಂದಿದ್ದಾರೆ.
ಈ ರೈಲಿನ ಕೆಲವು ಬೋಗಿಗಳು ಹಾದುಹೋಗುತ್ತಿದ್ದ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ನ ಹಿಂಭಾಗಕ್ಕೂ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದಾರೆ. 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡ ಸುಮಾರು 56 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ಬಳಿಕ ಅಪಘಾತದ ಕೋಚ್‌ಗಳನ್ನು ತೆಗೆದುಹಾಕಲಾಗಿದ್ದು, ಈಗ ಟ್ರ್ಯಾಕ್‌ಗಳನ್ನು ಹಾಕುವ ಮತ್ತು ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. 1000ಕ್ಕೂ ಹೆಚ್ಚು ರೈಲ್ವೆ ನೌಕರರು ಈ ಕಾರ್ಯದಲ್ಲಿ ತೊಡಗಿದ್ದಾರೆ, ದುರಸ್ತಿ ಕಾರ್ಯಕ್ಕಾಗಿ 7ಕ್ಕೂ ಹೆಚ್ಚು ಪೊಕ್ಲೆನ್ ಯಂತ್ರಗಳು, ಕ್ರೇನ್ ಇತ್ಯಾದಿಗಳನ್ನು ಅಳವಡಿಸಲಾಗಿದೆ.