Mysore
25
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಉಗ್ರ ಯಾಸಿನ್ ಮಲಿಕ್​​ ಹಾಜರಿ: ತಿಹಾರ್ ಜೈಲಿನ ನಾಲ್ವರು ಸಿಬ್ಬಂದಿ ಅಮಾನತು

ದೆಹಲಿ : ಜೈಲಿನಲ್ಲಿರುವ ಹುರಿಯತ್ ನಾಯಕ ಯಾಸಿನ್‌ ಮಲ್ಲಿಕ್‌ನ್ನು ಸುಪ್ರೀಂಕೋರ್ಟ್‌ನಲ್ಲಿ ಖುದ್ದಾಗಿ ಹಾಜರುಪಡಿಸಿದ ಒಂದು ದಿನದ ನಂತರ ತಿಹಾರ್ ಕೇಂದ್ರ ಕಾರಾಗೃಹದ ಜೈಲು ಸಂಖ್ಯೆ 7 ರ ಒಬ್ಬ ಉಪ ಅಧೀಕ್ಷಕರು, ಇಬ್ಬರು ಸಹಾಯಕ ಸೂಪರಿಂಟೆಂಡೆಂಟ್‌ಗಳು ಮತ್ತು ಒಬ್ಬ ಮುಖ್ಯ ವಾರ್ಡರ್ ಸೇರಿದಂತೆ ನಾಲ್ವರು ಸಿಬ್ಬಂದಿಗಳನ್ನು ದೆಹಲಿ ಕಾರಾಗೃಹ ಅಧಿಕಾರಿಗಳು ಶನಿವಾರ ಅಮಾನತುಗೊಳಿಸಿದ್ದಾರೆ.

ಗಂಭೀರ ಭದ್ರತಾ ಲೋಪವನ್ನು ಉಲ್ಲೇಖಿಸಿ ಇವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.

ಈ ವಿಷಯದ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿರುವ ಡೈರೆಕ್ಟರ್ ಜನರಲ್ (ಜೈಲು) ಸಂಜಯ್ ಬನಿವಾಲ್, ಮೇಲ್ನೋಟಕ್ಕೆ ಈ ನಾಲ್ವರು ಅಧಿಕಾರಿಗಳು ಮಲಿಕ್​​ನ್ನು ಉನ್ನತ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿಸಲು ಜವಾಬ್ದಾರರು ಎಂದು ಕಂಡುಬಂದಿದೆ ಎಂದು ಹೇಳಿದರು.

“ತಪ್ಪು ಮಾಡಿದ ಅಧಿಕಾರಿಗಳ ಜವಾಬ್ದಾರಿಯನ್ನು ಸರಿಪಡಿಸಲು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಜೈಲು ಪ್ರಧಾನ ಕಛೇರಿ) ರಾಜೀವ್ ಸಿಂಗ್ ಅವರು ಈ ವಿಷಯದಲ್ಲಿ ವಿವರವಾದ ತನಿಖೆಯನ್ನು ನಡೆಸುವಂತೆ ನಾನು ಈಗಾಗಲೇ ಆದೇಶಿಸಿದ್ದೇನೆ. ಜೈಲು ಅಧಿಕಾರಿಗಳ ಕಡೆಯಿಂದ ಗಂಭೀರ ಲೋಪವಾಗಿರುವುದರಿಂದ ಸೋಮವಾರದೊಳಗೆ ಈ ಸಂಬಂಧ ತಮ್ಮ ವರದಿಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಬನಿವಾಲ್ ಹೇಳಿದ್ದಾರೆ.

ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ಮಲಿಕ್‌ನನ್ನು ಹಾಜರುಪಬಡಿಸಲು ಸ್ಪಷ್ಟವಾದ ಸೂಚನೆ ಇದೆ. ಇದರ ಬದಲಾಗಿ, ಮಲಿಕ್ ನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರುಪಡಿಸಲಾಯಿತು. ಇದು ಖಂಡಿತವಾಗಿಯೂ ನಮ್ಮ ಕಡೆಯಿಂದ ಘೋರ ಲೋಪವಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬನಿವಾಲ್ ಹೇಳಿದ್ದಾರೆ.

ಭಯೋತ್ಪಾದಕನನ್ನು ಖುದ್ದಾಗಿ ಹಾಜರು ಮಾಡುವುದಕ್ಕೆ ನಿರ್ಬಂಧವಿದೆ. ಆದರೆ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಲಿಕ್ ಶುಕ್ರವಾರ ಪೊಲೀಸ್ ಬೆಂಗಾವಲಿನಲ್ಲಿ ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರಿಗೆ ಬರೆದ ಪತ್ರದಲ್ಲಿ “ದೊಡ್ಡ ಭದ್ರತಾ ಲೋಪ” ಎಂದು ಹೇಳಿದ್ದಾರೆ.

ಯಾವುದೇ ಆದೇಶ ಅಥವಾ ನ್ಯಾಯಾಲಯದ ಅಧಿಕಾರ ಇಲ್ಲದೆ, ಪ್ರತ್ಯೇಕತಾವಾದಿ ನಾಯಕನನ್ನು ಹೊರತರಲು ಹೇಗೆ ಅವಕಾಶ ನೀಡಲಾಯಿತು ಎಂದು ಮೆಹ್ತಾ ಕೇಳಿದ್ದು, ಜೈಲು  ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ