ಮುಂಬೈ : ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಮಂಗಳವಾರ ವೇಗವಾಗಿ ಬಂದ ಕಂಟೇನರ್ ಟ್ರಕ್ ನಿಂದ ಭಯಾನಕ ಸರಣಿ ಅಪಘಾತ ಸಂಭವಿಸಿದ್ದು, ದುರಂತದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು,20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಹೆದ್ದಾರಿಯಲ್ಲಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್, ಬಳಿಕ ಹೋಟೆಲ್ ಒಂದಕ್ಕೂ ನುಗ್ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎದೆನಡುಗಿಸುವ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಜಧಾನಿ ಮುಂಬೈಯಿಂದ ಸುಮಾರು 300 ಕಿಮೀ ದೂರದಲ್ಲಿರುವ ಧುಲೆ ಜಿಲ್ಲೆಯ ಪಲಾಸ್ನೇರ್ ಗ್ರಾಮದ ಸಮೀಪ ಮುಂಬೈ – ಆಗ್ರಾ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಂಟೇನರ್ ಟ್ರಕ್‌ನ ಬ್ರೇಕ್ ಫೇಲ್ಯೂರ್ ಆಗಿದ್ದು, ಚಾಲಕ ನಿಯಂತ್ರಣ ಕಳೆದುಕೊಂಡಿದ್ದ. ವೇಗವಾಗಿ ಚಲಿಸುತ್ತಿದ್ದ ಟ್ರಕ್‌ನ ಮುಂಭಾಗವು, ಎರಡು ಬೈಕ್‌ಗಳು, ಒಂದು ಕಾರು ಹಾಗೂ ಮತ್ತೊಂದು ಟ್ರಕ್‌ಗೆ ಅಪ್ಪಳಿಸಿದೆ. ಬಳಿಕ ಹೆದ್ದಾರಿಯಲ್ಲಿನ ಬಸ್ ನಿಲ್ದಾಣದ ಸಮೀಪದಲ್ಲಿನ ಹೋಟೆಲ್‌ಗೆ ಡಿಕ್ಕಿ ಹೊಡೆದಿದೆ. ಆ ರಭಸಕ್ಕೆ ಉರುಳಿ ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಮ ಸ್ವರೂಪಿ ಟ್ರಕ್‌ಗೆ ಬಲಿಯಾದ ಕೆಲವು ಸಂತ್ರಸ್ತರು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಈ ಟ್ರಕ್ ಮಧ್ಯಪ್ರದೇಶದಿಂದ ಧುಲೆಗೆ ತೆರಳುತ್ತಿತ್ತು. ಅಪಘಾತದ ಬಳಿಕ ಸ್ಥಳದಲ್ಲಿ ಭಾರಿ ದಟ್ಟನೆಯ ದೂಳು ಆವರಿಸಿತ್ತು. ಗಾಯಾಳುಗಳನ್ನು ಸಮೀಪದ ಧಲೆ ಹಾಗೂ ಶಿರ್ಪುರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
VIDEO | At least 15 people reportedly killed in an accident involving a truck and several vehicles on the Mumbai-Agra Highway in Dhule, Maharashtra. pic.twitter.com/49JmnBSUJs
— Press Trust of India (@PTI_News) July 4, 2023





