Mysore
20
overcast clouds
Light
Dark

ತಮಿಳುನಾಡು: ನೀಟ್ ವಿರುದ್ಧ ಡಿಎಂಕೆಯಿಂದ ಸಹಿ ಅಭಿಯಾನ

ನವದೆಹಲಿ : ನೀಟ್ ವಿರುದ್ಧ ಡಿಎಂಕೆ ಶನಿವಾರ ರಾಜ್ಯ ವ್ಯಾಪಿ ಸಹಿ ಅಭಿಯಾನವನ್ನು ಆರಂಭಿಸಿದೆ.

ಈ ಸಹಿ ಅಭಿಯಾನಕ್ಕೆ ಸಹಿ ಹಾಕಿದ ಮೊದಲ ವ್ಯಕ್ತಿ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್. ನೀಟ್ ಅನ್ನು ವಿರೋಧಿಸಿ ನಡೆಯುತ್ತಿರುವ ಈ ಅಭಿಯಾನದಲ್ಲಿ ಪಕ್ಷ ರಾಜ್ಯಾದ್ಯಂತ 50 ದಿನಗಳಲ್ಲಿ 50 ಲಕ್ಷ ಸಹಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ಕಳೆದ ಕೆಲವು ತಿಂಗಳಿಂದ ನೀಟ್ ಪರೀಕ್ಷೆ ನಡೆಸುವುದನ್ನು ವಿರೋಧಿಸುತ್ತಿರುವ ಸ್ಟಾಲಿನ್, ಬಿಜೆಪಿ ನೀಟ್ ಪರೀಕ್ಷೆಯನ್ನು ರಾಜಕೀಯಗೊಳಿಸಿದೆ ಎಂದು ಆರೋಪಿಸಿದ್ದಾರೆ. ನೀಟ್ ಪರೀಕ್ಷೆಯನು ವಿರೋಧಿಸುತ್ತಿರುವ ಡಿಎಂಕೆ, ಈ ಪರೀಕ್ಷೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇದು ನಗರದಲ್ಲಿರುವ ಹಾಗೂ ಸಾಕಷ್ಟು ಕೋಚಿಂಗ್ ಸೆಂಟರ್‌ಗಳ ಸೌಲಭ್ಯವಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲಕರವಾಗಿದೆ ಎಂದು ಹೇಳಿದೆ.

ರಾಜ್ಯದಲ್ಲಿ ನೀಟ್ ಪರೀಕ್ಷೆಯ ಕಾರಣಕ್ಕೆ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅದರ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಈ ಹಿಂದೆ ನೀಟ್ ರದ್ದುಗೊಳಿಸುವಂತೆ ಆಗ್ರಹಿಸಿ ನೀಟ್ ಒಂದು ದಿನ ಉಪವಾಸ ಮುಷ್ಕರವನ್ನು ಕೂಡ ನಡೆಸಿತ್ತು.

ಪರೀಕ್ಷೆಯ ವಿರುದ್ಧ ಸಾಕಷ್ಟು ಸಂಖ್ಯೆಯ ಸಹಿಗಳನ್ನು ಸಂಗ್ರಹಿಸಲು ಪಕ್ಷ ಸಫಲವಾದರೆ, ಅದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿ ಕೊಡಲಿದೆ.

ಈ ಸಹಿ ಅಭಿಯಾನವನ್ನು ಉದ್ಘಾಟಿಸಿದ ಡಿಎಂಕೆಯ ಯುವ ಘಟಕದ ಕಾರ್ಯದರ್ಶಿ ಹಾಗೂ ಸಚಿವ ಉದಯನಿಧಿ ಸ್ಟಾಲಿನ್, ‘‘ನೀಟ್‌ನಿಂದ ಎನ್‌ಇಪಿ ವರೆಗೆ ಫ್ಯಾಸಿಸ್ಟ್‌ಗಳು ನಮ್ಮ ಶಿಕ್ಷಣದ ಹಕ್ಕನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಇದರ ವಿರುದ್ಧ ನಿರಂತರ ಹೋರಾಡಬೇಕು. ನೀಟ್ ರದ್ದುಪಡಿಸುವ ನಮ್ಮ ಆಗ್ರಹವನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ, ಜಲ್ಲಿಕಟ್ಟಿನ ಪರವಾಗಿ ನಡೆದ ಸಾಮೂಹಿಕ ಪ್ರತಿಭಟನೆಯಂತಹ ಪ್ರತಿಭಟನೆಯನ್ನು ನಡೆಸಬೇಕಾದೀತು ಎಂದು ನಾನು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡುತಿದ್ದೇನೆ’’ ಎಂದಿದ್ದಾರೆ.

ಇದಲ್ಲದೆ, ಸಹಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಎಐಎಡಿಎಂಕೆ ಸೇರಿದಂತೆ ಹಲವು ಪಕ್ಷಗಳನ್ನು ಉದಯನಿಧಿ ಸ್ಟಾಲಿನ್ ಆಗ್ರಹಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ