Mysore
20
overcast clouds
Light
Dark

‘ಅಮಾನತುಗೊಂಡ ಸಂಸದ’: ಟ್ವಿಟರ್ ಬಯೋ ಬದಲಿಸಿದ ಆಪ್ ನಾಯಕ ರಾಘವ್ ಚಡ್ಡಾ

ನವದೆಹಲಿ : ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು, ತಮ್ಮ ಎಕ್ಸ್ (ಟ್ವಿಟರ್) ಬಯೋವನ್ನು ‘ಅಮಾನತುಗೊಂಡ ಸಂಸದ’ ಎಂದು ಬದಲಿಸಿದ್ದಾರೆ.

“ನಿಯಮಗಳ ಉಲ್ಲಂಘನೆ, ಅನುಚಿತ ವರ್ತನೆ, ಉದ್ಧಟತನದ ಪ್ರವೃತ್ತಿ ಹಾಗೂ ಮಾನಹಾನಿಯಾಗುವಂತಹ ವರ್ತನೆ”ಗಾಗಿ ರಾಜ್ಯಸಭೆಯಿಂದ ರಾಘವ್ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ನಡುವೆ ರಾಘವ್ ಚಡ್ಡಾ ವಿರುದ್ಧದ ಆರೋಪದ ಕುರಿತು ಹಕ್ಕುಚ್ಯುತಿ ಸಮಿತಿಯು ಇನ್ನಷ್ಟೇ ವರದಿ ನೀಡಬೇಕಿದೆ.

‘ಅಮಾನತುಗೊಂಡ ಸಂಸದ’ ಎಂದು ತಮ್ಮ  ಟ್ವಿಟರ್ ಬಯೋ ಬದಲಿಸಿದ ಆಪ್ ನಾಯಕ ರಾಘವ್ ಚಡ್ಡಾ

ಪ್ರಸ್ತಾವಿತ ರಾಷ್ಟ್ರೀಯ ರಾಜಧಾನಿ ದಿಲ್ಲಿ ಕೇಂದ್ರಾಡಳಿತ ಪ್ರದೇಶದ ಸರ್ಕಾರ (ತಿದ್ದುಪಡಿ) ಮಸೂದೆ, 2023ರ ಆಯ್ಕೆ ಸಮಿತಿಯಲ್ಲಿ ರಾಜ್ಯಸಭೆಯ ಕೆಲವು ಸದಸ್ಯರ ಹೆಸರನ್ನು ಅವರ ಒಪ್ಪಿಗೆ ಇಲ್ಲದೆ ಸೇರ್ಪಡೆ ಮಾಡಿರುವ ಆಪ್ ನಾಯಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಭಾನಾಯಕರಾಗಿದ್ದ ಪಿಯೂಷ್ ಗೋಯಲ್ ಅವರು ಶುಕ್ರವಾರ ರಾಘವ್ ಚಡ್ಡಾ ಅವರ ವಿರುದ್ಧ ಅಮಾನತು ನಿರ್ಣಯವನ್ನು ಮಂಡಿಸಿದ್ದರು.

ಇದಕ್ಕೆ ಪ್ರತಿಯಾಗಿ, ಶುಕ್ರವಾರ ರಾತ್ರಿ ಪ್ರತಿಕ್ರಿಯಿಸಿದ್ದ ರಾಘವ್ ಚಡ್ಡಾ, “ನೀವು ಪ್ರಶ್ನೆಗಳನ್ನು ಕೇಳುವ ಧೈರ್ಯ ಪ್ರದರ್ಶಿಸಿದರೆ, ನಿಮ್ಮ ಧ್ವನಿಯನ್ನು ಹತ್ತಿಕ್ಕಲಾಗುವುದು ಎಂಬ ಸಂದೇಶವನ್ನು ನನ್ನ ಅಮಾನತು ಆದೇಶವು ಯುವಜನರಿಗೆ ತಲುಪಿಸಿದೆ. ದಿಲ್ಲಿ ಸೇವೆ ಮಸೂದೆಯ ಕುರಿತು ನಾನು ಕೇಳಿದ ಕಠಿಣ ಪ್ರಶ್ನೆಗಳಿಗೆ ವಿಶ್ವದ ಅತಿ ದೊಡ್ಡ ಪಕ್ಷವಾದ ಬಿಜೆಪಿಯ ಬಳಿ ಉತ್ತರವಿಲ್ಲದೆ ಇದ್ದುದರಿಂದ ನನ್ನನ್ನು ಅಮಾನತುಗೊಳಿಸಲಾಗಿದೆ” ಎಂದು ಆರೋಪಿಸಿದ್ದಾರೆ.

ಜುಲೈ 20ರಂದು ಪ್ರಾರಂಭವಾಗಿ ಶುಕ್ರವಾರ ಅಂತ್ಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಮಾನತುಗೊಂಡಿರುವ ಎರಡನೆಯ ಆಪ್ ನಾಯಕ ರಾಘವ್ ಚಡ್ಡಾ ಆಗಿದ್ದಾರೆ. ಇದಕ್ಕೂ ಮುನ್ನ ಆಪ್ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಅವರನ್ನು ಜುಲೈ 24ರಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಅವರ ಅಮಾನತು ಅವಧಿಯನ್ನು ಮುಂದುವರಿಸಲು ಸದನವು ಶುಕ್ರವಾರ ಸಮ್ಮತಿ ಸೂಚಿಸಿತ್ತು. ಅವರ ವಿರುದ್ಧದ ಹಕ್ಕುಚ್ಯುತಿ ಸಮಿತಿಯ ವರದಿಯು ಇನ್ನೂ ಬಾಕಿ ಇದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ