Mysore
23
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ದೆಹಲಿಯಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿದ ಸುಪ್ರೀಂ ಕೋರ್ಟ್: ರ್‍ಯಾಪಿಡೋ, ಉಬರ್‌ಗೆ ಭಾರೀ ಹಿನ್ನಡೆ

ನವದೆಹಲಿ: ದಿಲ್ಲಿಯಲ್ಲಿ ಬೈಕ್‌ ಟ್ಯಾಕ್ಸಿಗಳ ಕಾರ್ಯಾಚರಣೆ ನಡೆಸುತ್ತಿದ್ದ ಅಗ್ರಗೇಟರ್‌ಗಳಾದ ರ್‍ಯಾಪಿಡೋ ಹಾಗೂ ಉಬರ್‌ಗೆ ಸುಪ್ರೀಂ ಕೋರ್ಟ್‌ನ ಸೋಮವಾರದ ತೀರ್ಪು ತಣ್ಣೀರೆರೆಚಿದೆ.

ಬೈಕ್‌ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿ ನೀಡಿ ದಿಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ಇದು ರಾಷ್ಟ್ರ ರಾಜಧಾನಿಯಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದ ರ್‍ಯಾಪಿಡೋ ಹಾಗೂ ಉಬರ್‌ಗೆ ಭಾರೀ ಹಿನ್ನಡೆ ಉಂಟು ಮಾಡಿವೆ. ರ್‍ಯಾಪಿಡೋ ಮತ್ತು ಉಬರ್‌ ಕಂಪನಿಗಳಿಗೆ ಅಂತಿಮ ನೀತಿಯನ್ನು ಪ್ರಕಟಿಸುವವರೆಗೆ ಅಗ್ರಿಗೇಟರ್ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಲು ತನ್ನ ತೀರ್ಪಿನಲ್ಲಿ ದಿಲ್ಲಿ ಹೈಕೋರ್ಟ್‌ ಅನುಮತಿ ನೀಡಿತ್ತು. ಈ ತೀರ್ಪನ್ನೀಗ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದು, ಆಪ್‌ ಮೂಲಕ ಬೈಕ್‌ ಸೇವೆ ನೀಡುತ್ತಿದ್ದ ಕಂಪನಿಗಳಿಗೆ ನಿರಾಸೆಯಾಗಿದೆ.

ಜುಲೈ ಅಂತ್ಯದೊಳಗೆ ಬೈಕ್ ಅಗ್ರಿಗೇಟರ್‌ಗಳ ಕಾರ್ಯಾಚರಣೆಯನ್ನು ನಿಯಂತ್ರಿಸಲು ಮಾರ್ಗಸೂಚಿಗಳು ಮತ್ತು ಪರವಾನಗಿ ನೀತಿಗಳನ್ನು ರೂಪಿಸುವುದಾಗಿ ದಿಲ್ಲಿಯ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ರಜಾಕಾಲದ ಪೀಠವು ದಿಲ್ಲಿ ಹೈಕೋರ್ಟ್‌ನಲ್ಲಿ ತಮ್ಮ ಅರ್ಜಿಯ ತುರ್ತು ವಿಚಾರಣೆಗೆ ಕೋರುವ ಅವಕಾಶವನ್ನು ಎರಡೂ ಕಂಪನಿಗಳಿಗೆ ನೀಡಿದೆ. ದಿಲ್ಲಿ ಹೈಕೋರ್ಟ್‌ನ ಮೇ 26ರ ಆದೇಶದ ಅನುಷ್ಠಾನವನ್ನು ಸುಪ್ರೀಂ ಕೋರ್ಟ್‌ನ ಪೀಠವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಜುಲೈ ಅಂತ್ಯದೊಳಗೆ ಅಂತಿಮ ನೀತಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ದಿಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಅಂತಿಮ ನೀತಿಯನ್ನು ಬಿಡುಗಡೆ ಮಾಡುವವರೆಗೆ ರ್‍ಯಾಪಿಡೋ ಹಾಗೂ ಉಬರ್‌ ಸೇರಿದಂತೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ಹೈಕೋರ್ಟ್‌ನ ಮೇ 26ರ ಆದೇಶವನ್ನು ಪ್ರಶ್ನಿಸಿ ಆಮ್‌ ಆದ್ಮಿ ಪಕ್ಷದ ಸರ್ಕಾರವು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪರಿಗಣಿಸಿತ್ತು.

ಕಳೆದ ವಾರ ದೆಹಲಿ ಸರ್ಕಾರ ಸಲ್ಲಿಸಿದ ಎರಡೂ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!