ತುಮಕೂರು : ಯುವಕರಿಗೆ ಅವಕಾಶ ಕೊಡಬೇಕು ಎಂದು ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ನಾನು ವಿಜಯೇಂದ್ರ ಎಂದಾಗಲಿ ಅಥವಾ ಯಡಿಯೂರಪ್ಪನವರ ಮಗ ಎಂದಾಗಲಿ ನನ್ನನ್ನು ಆಯ್ಕೆ ಮಾಡಿಲ್ಲ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾರಿಗೆ ರಾಜ್ಯಾಧ್ಯಕ್ಷರ ಸ್ಥಾನವನ್ನು ನೀಡಬೇಕು ಎಂಬುದರ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ.ಅಂತಿಮವಾಗಿ ನನಗೆ ಈ ಜವಬ್ದಾರಿ ಕೊಟ್ಟಿದ್ದಾರೆ. ನಾನು ವಿಜಯೇಂದ್ರ ಎಂದಾಗಲಿ ಅಥವಾ ಯಡಿಯೂರಪ್ಪನವರ ಮಗ ಎಂದಾಗಲಿ ನನಗೆ ಈ ಸ್ಥಾನವನ್ನು ಕೊಟ್ಟಿಲ್ಲ. ಯುವಕ ಎನ್ನುವ ಕಾರಣಕ್ಕೆ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 25 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು,ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಪಕ್ಷ ಸಂಘಟನೆ ಮಾಡಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.