Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮೋದಿ ಸರಕಾರದಿಂದ ಪ್ರಜಾತಂತ್ರಕ್ಕೆ ಕುತ್ತು : ಸೋನಿಯಾ ಗಾಂಧಿ ಆರೋಪ

ಹೊಸದಿಲ್ಲಿ : ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ವ್ಯವಸ್ಥಿತವಾಗಿ ಹಾನಿಗೊಳಿಸುತ್ತಿದೆ. ಪ್ರತಿಪಕ್ಷಗಳ ನಾಯಕರನ್ನು ಮಣಿಸಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಲವಂತದ ಒತ್ತಡ ಹೇರಿಕೆ ಮೂಲಕ ಧ್ವನಿ ಅಡಗಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಆರೋಪಿಸಿದ್ದಾರೆ.

ಆ್ಯನ್‌ ಎನ್‌ಫೋರ್ಸ್ಡ್ ಸೈಲೆನ್ಸ್‌ ಕೆನಾಟ್‌ ಸಾಲ್ವ್ ಇಂಡಿಯಾಸ್‌ ಪ್ರಾಬ್ಲಮ್ಸ್‌ ಎಂಬ ಶೀರ್ಷಿಕೆಯಡಿ ಹಿಂದೂ ದೈನಿಕಕ್ಕೆ ಬರೆದಿರುವ ವಿಶೇಷ ಲೇಖನದಲ್ಲಿ ಸೋನಿಯಾ ಅವರು ಕೇಂದ್ರ ಸರಕಾರದ ನಡೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ಇದೇ ವೇಳೆ ಅವರು ಸಂವಿಧಾನದ ರಕ್ಷಣೆಗಾಗಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್‌ ಕೈಜೋಡಿಸಲಿದೆ ಎಂದು ಸ್ಪಷ್ಪಪಡಿಸಿದ್ದಾರೆ.

ಬರೀ ಮೋಡಿ ಮಾಡುವ ಬಣ್ಣದ ಮಾತುಗಳಿಂದ ದೇಶದ ಸಮಸ್ಯೆಗಳನ್ನು ಪರಿಹರಿಸಲಾಗದು. ಮೋದಿ ಸರಕಾರವು ಇತ್ತೀಚಿನ ಬಜೆಟ್‌ ಅಧಿವೇಶನವನ್ನು ವ್ಯವಸ್ಥಿತವಾಗಿ ಹಳ್ಳಹಿಡಿಸಿತು. ನಿರುದ್ಯೋಗ, ಹಣದುಬ್ಬರ, ಅದಾನಿ ಹಗರಣಗಳನ್ನು ಪ್ರಸ್ತಾಪಿಸಿ, ಚರ್ಚೆ ನಡೆಸಲು ಪ್ರತಿಪಕ್ಷಗಳಿಗೆ ಅವಕಾಶವೇ ನೀಡಲಿಲ್ಲ. ಯಾವುದೇ ಗಂಭೀರ ಚರ್ಚೆ ಇಲ್ಲದೆಯೇ 45 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ಅನ್ನು ಅಂಗೀಕರಿಸಲಾಯಿತು,ಎಂದು ಲೇಖನದಲ್ಲಿ ಬರೆದುಕೊಂಡಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ತನಿಖಾ ಅಸ್ತ್ರ : ಕೇಂದ್ರ ಸರಕಾರವು ಪ್ರತಿಪಕ್ಷಗಳ ನಾಯಕರನ್ನು ಹಣಿಯಲು ತನಿಖಾ ಅಸ್ತ್ರ ಬಳಸುತ್ತಿದೆ. ಇ.ಡಿ, ಸಿಬಿಐ ಅಂಥಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಶೇ 95ರಷ್ಟು ರಾಜಕೀಯ ಪ್ರಕರಣಗಳನ್ನು ಪ್ರತಿಪಕ್ಷಗಳ ವಿರುದ್ಧ ದಾಖಲಿಸಲಾಗಿದೆ. ಬಿಜೆಪಿ ಸೇರುವವರ ವಿರುದ್ಧದ ಪ್ರಕರಣಗಳನ್ನು ನಾಜೂಕಾಗಿಯೇ ಕೈಬಿಡಲಾಗುತ್ತಿದೆ, ಎಂದು ಆರೋಪಿಸಿದ್ದಾರೆ.

ಮೋದಿಯವರ ಉದ್ಯಮ ಮಿತ್ರರ ಮಿತ್ರರ ಆರ್ಥಿಕ ಶಕ್ತಿಯಿಂದ, ಸರಕಾರದ ರಾಜಕೀಯ ಬೆದರಿಕೆಯಿಂದ ಮಾಧ್ಯಮಗಳ ಸ್ವಾತಂತ್ರ್ಯವೂ ರಾಜಿಗೊಂಡಿದೆ. ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಸಂಜೆಯ ರಾಜಕೀಯ ಚರ್ಚೆಗಳು ಬಹುತೇಕ ಏಕಪಕ್ಷೀಯವಾಗಿವೆ ಎಂದು ಸೋನಿಯಾ ಅವರು ಲೇಖನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ