ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ ಭೀತಿಯಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು 35 ದಿನಗಳ ಬಳಿಕ ಕೊನೆಗೂ ಎಸ್‌ಐಟಿ ಅಧಿಕಾರಿಗಳು ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಡ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆ ನಡೆದ ನಂತರ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದರು. ನಿನ್ನೆ(ಮೇ.31) ತಡರಾತ್ರಿ 12.50ರ ಸಮಯದಲ್ಲಿ ರಾಜ್ಯಕ್ಕೆ ಆಗಮಿಸಿದ ಪ್ರಜ್ವಲ್‌ರನ್ನು ಅಲ್ಲೇ ಮೊಕ್ಕಾಂ ಹೂಡಿದ್ದ ಎಸ್‌ಐಟಿ ಅಧಿಕಾರಿಗಳು ಕೇಂದ್ರ ಕೈಗಾರಿಗಾ ಭದ್ರತಾ ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳ ಸಹಾಯದಿಂದ ನಿಲ್ದಾಣದಲ್ಲಿಯೇ ಬಂಧಿಸಿದ್ದಾರೆ.
ಜರ್ಮನಿಯ ಮ್ಯೂನಿಕ್‌ನಿಂದ ಉಫ್ತಾನಾ ಏರ್‌ಲೈನ್ಸ್ ಎಲ್‌ಎಚ್-764 ನಿಂದ ಹೊರಟ ಅವರು ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ಕ್ಕೆ ಬಂದಿಳಿದರು.
ಬಳಿಕ ಬಂದ ಪ್ರಜ್ವಲ್‌ರನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ವಿಶೇಷ ಕೊಠಡಿಗೆ ಕರೆದೊಯ್ದು ಪರಿಶೀಲನೆ ನಡೆಸಿದರು. ನಂತರ ಪ್ರಜ್ವಲ್ ಅವರ ಬೆರಳಚ್ಚು, ಫೋಟೋ ಕ್ಲಿಕ್ಕಿಸಿಕೊಂಡು ದಾಖಲಿಸಿಕೊಂಡರು.
ನಿಲ್ದಾಣದಿಂದ ಪ್ರಜ್ವಲ್‌ರನ್ನು ಎಸ್‌ಐಟಿ ಅಧಿಕಾರಿಗಳು ವಿಶೇಷ ವಾಹನದ ಮೂಲಕ ಬಳ್ಳಾರಿ ರಸ್ತೆಯಿಂದ ಅರಮನೆ ರಸ್ತೆ ಬಳಿಯಿರುವ ಎಸ್‌ಐಟಿ ಕಚೇರಿಗೆ ಕರೆದೊಯ್ದರು. ಮುಂಜಾಗೃತ ಕ್ರಮವಾಗಿ ಎಸ್‌ಐಟಿ ಕಚೇರಿ ಹಾಗೂ ರಸ್ತೆ ಸುತ್ತಲೂ ಬಿಗಿ ಭದ್ರತಾ ಕ್ರಮ ಕೈಗೊಂಡಿದ್ದರು..