Mysore
20
overcast clouds
Light
Dark

ಏಕಕಾಲಿಕ ಚುನಾವಣೆಗಳು 2029ರಲ್ಲಷ್ಟೇ ಸಾಧ್ಯ: ಕಾನೂನು ಆಯೋಗ

ನವದೆಹಲಿ : ಸಂವಿಧಾನಕ್ಕೆ ಅಗತ್ಯ ಸಂಭಾವ್ಯ ಬದಲಾವಣೆಗಳು ಸೇರಿದಂತೆ ಮಾರ್ಗಸೂಚಿಯೊಂದನ್ನು ಕಾನೂನು ಆಯೋಗವು ಏಕಕಾಲಿಕ ಚುನಾವಣೆಗಳ ಪ್ರಸ್ತಾವವನ್ನು ಪರಿಶೀಲಿಸುತ್ತಿರುವ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಗೆ ಸಲ್ಲಿಸಿದೆ.

ಆಯಾ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯನ್ನು ವಿಸ್ತರಿಸುವ ಅಥವಾ ಕಡಿತಗೊಳಿಸುವ ಮೂಲಕ ಎಲ್ಲ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ತಾನು ಸೂತ್ರವೊಂದನ್ನು ರೂಪಿಸಬೇಕಿದೆ ಮತ್ತು ಇದಕ್ಕೆ ಸಮಯಾವಕಾಶ ಅಗತ್ಯವಿದೆ, ಹೀಗಾಗಿ ಏಕಕಾಲಿಕ ಚುನಾವಣೆಗಳ ಪ್ರಸ್ತಾವವು 2029ರ ವೇಳೆಗಷ್ಟೇ ಕಾರ್ಯರೂಪಕ್ಕೆ ಬರಲು ಸಾಧ್ಯ ಎಂದು ಆಯೋಗವು ಹೇಳಿದೆ. ಈ ಸಂಬಂಧ ಕಾನೂನು ಆಯೋಗದಿಂದ ವರದಿ ಇನ್ನೂ ಬಾಕಿಯುಳಿದಿದ್ದು, ಕೋವಿಂದ್ ಸಮಿತಿಯೊಂದಿಗೆ ಇನ್ನೊಂದು ಸುತ್ತಿನ ಚರ್ಚೆಗಾಗಿ ಅದನ್ನು ಆಹ್ವಾನಿಸಲಾಗುವುದು.

ಕಾನೂನು ಆಯೋಗವು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವವನ್ನು ಪರಿಶೀಲಿಸುತ್ತಿದ್ದರೆ ಕೋವಿಂದ್ ಸಮಿತಿಯು ವಿಧಾನಸಭೆ, ಸಂಸತ್, ನಗರಸಭೆ ಮತ್ತು ಪಂಚಾಯತ್ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಮಾರ್ಗಗಳನ್ನು ಅನ್ವೇಷಿಸುತ್ತಿದೆ.

ಕೋವಿಂದ್ ಸಮಿತಿಗೆ ‘ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಉನ್ನತ ಮಟ್ಟದ ಸಮಿತಿ (ಎಚ್‌ಎಲ್‌ಸಿ)’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ ಎಂದು ಕಾನೂನು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಏಕಕಾಲಿಕ ಚುನಾವಣೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರಿ ಎಚ್‌ಎಲ್‌ಸಿ ಈಗಾಗಲೇ ದೇಶಾದ್ಯಂತದ ರಾಜಕೀಯ ಪಕ್ಷಗಳಿಗೆ ಪತ್ರಗಳನ್ನು ಬರೆದಿದೆ.

ಬುಧವಾರ ಸಭೆ ನಡೆಸಿದ ಎಚ್‌ಎಲ್‌ಸಿಯು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ ಚೌಧುರಿ ಅವರು ಸಮಿತಿಯ ಸದಸ್ಯತ್ವಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಗಮನಕ್ಕೆ ತೆಗೆದುಕೊಂಡಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ