ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜ್ವರ ಹಾಗೂ ಬಳಲಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಪತ್ನಿ ಆರೋಗ್ಯ ವಿಚಾರಿಸಿದ್ದಲ್ಲದೆ, ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು.
ವಾಪಸ್ಸು ತೆರಳುವ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಹೆಚ್ಚು ಮಾತಾಡಲಿಲ್ಲ. ಮೇಡಂ ಹೇಗಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಅವರು ಚೆನ್ನಾಗಿದ್ದಾರೆ, ತೊಂದರೆಯಿಲ್ಲ ಅಂತಷ್ಟೇ ಹೇಳಿದರು. ನಂತರ ಮುಖ್ಯಮಂತ್ರಿ ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಸ್ವಲ್ಪ ಹೊತ್ತು ಮಾತಾಡಿ ಅಲ್ಲಿಂದ ನಿರ್ಗಮಿಸಿದರು.
ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಪಾರ್ವತಿಯವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರಿಗೆ ಎಮ್‍ಐಸಿಯು (ಮೆಡಿಕಲ್ ಇಂಟೆನ್ಸಿವ್ ಕೇರ್ ಯುನಿಟ್) ಚಿಕಿತ್ಸೆ ನೀಡಲಾಗುತ್ತಿದೆ.
ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ತಮ್ಮ ದೆಹಲಿ ಪ್ರವಾಸವನ್ನು 2 ಗಂಟೆ ಮುಂದೂಡಿದರು. ಆಸ್ಪತ್ರೆ ಭೇಟಿಯ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.