ಬೆಂಗಳೂರು : ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಮುಖ್ಯಮಮತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನದ ಹೊಗೆಯಾಡಲು ಆರಂಭವಾಗಿದೆ. ಪ್ರಮಾಣವಚನ ಕಾರ್ಯಕ್ರಮದಿಂದ ದೂರ ಉಳಿದ ಮಧು ಬಂಗಾರಪ್ಪ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರವಷ್ಟೇ ಅವರಿಗೆ, ‘ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿ’ ಎಂದು ಕೈ ನಾಯಕರು ಸೂಚನೆ ಕೊಟ್ಟಿದ್ದರು ಎನ್ನಲಾಗಿದೆ. ಆದರೆ, ಬೆಳಿಗ್ಗೆ ಪಟ್ಟಿಯಲ್ಲಿ ಹೆಸರು ಇರಲಿಲ್ಲ.ಹೀಗಾಗಿ ಮಧು ಬಂಗಾರಪ್ಪ ಪಕ್ಷದ ನಾಯಕರನ್ನು ಸಂಪರ್ಕಿಸಿದ್ದಾರೆ. ನಾಯಕರಿಂದ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಪ್ರಮಾಣವಚನ ಸಮಾರಂಭದಿಂದ ದೂರ ಉಳಿದಿದ್ದಾರೆ.
ಮಲೆನಾಡಿನಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಕೊಡುಗೆ ಇದೆ. ಒಬಿಸಿ ಸೆಲ್ ಮುಖ್ಯಸ್ಥರಾಗಿ ಕೆಲಸ ಮಾಡಿದ್ದೇನೆ. ಸಮುದಾಯ ಕಾಂಗ್ರೆಸ್ ಕೈ ಹಿಡಿದಿದೆ. ಆದರೂ ಸಚಿವ ಸ್ಥಾನ ನೀಡಲ್ಲ ಎಂದು ಅವರು ಆಪ್ತರ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ನಡೆಯಿತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಾತ್ರವಲ್ಲದೆ, ಡಾ. ಜಿ ಪರಮೇಶ್ವರ, ಕೆಹೆಚ್ ಮುನಿಯಪ್ಪ, ಕೆಜೆ ಜಾರ್ಜ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ ಹಾಗೂ ಬಿಝಡ್ ಜಮೀರ್ ಅಹ್ಮದ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.





