ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಸಮ್ಮಿಲನವಾಗಿದೆ.
ನಗರದ ಜಯಲಕ್ಷ್ಮೀ ಪುರಂನ ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಆ ಮೂಲಕ ಹಲವು ವರ್ಷಗಳಿಂದ ದೂರವಿದ್ದ ದೋಸ್ತಿಗಳು ಮತ್ತೆ ಒಂದಾಗಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ರಾಜಕೀಯ ವೈಮನಸ್ಸಿಂದ ದೂರ ಉಳಿದಿದ್ದ ಹಳೇ ಮೈಸೂರು ಭಾಗದ ಪ್ರಭಾವಿ ರಾಜಕಾರಣಿಗಳು ಮುನಿಸು ಮರೆತು ಒಂದಾಗಿದ್ದಾರೆ. ಈ ಸೌಹಾರ್ದಯುತ ಭೇಟಿಯ ವೇಳೆ ಸಿಎಂ ಸಿದ್ದರಾಮಯ್ಯ ಅವರು ಪ್ರಸಾದ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಲು ನಿರಾಕರಿಸಿದ್ದ ಸಿಎಂ, ಮುಂದಿನ ದಿನಗಳಲ್ಲಿ ದುಬಾರಿ ಬೆಲೆ ತೆತ್ತಬೇಕಾಗುತ್ತದೆ ಎಂಬುದನ್ನು ಅರಿತು ದಿಢೀರ್ ಭೇಟಿ ನೀಡಿದ್ದಾರೆ. ಪ್ರಸಾದ್ ಅವರ ಪ್ರಭಾವ ಇವೆಲ್ಲಕ್ಕೂ ಕಾರಣವಾಗಿದೆ.
ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಭೇಟಿ ಬಳಿಕ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಸಾದ್ ಅವರು ಕಾಂಗ್ರೆಸ್‌ನಲ್ಲಿದ್ದವರು. ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿ ಎಂದು ಹೇಳಿದ್ದೇನೆ ವಿನಃ ರಾಜಕೀಯ ಚರ್ಚೆಗಳು ನಡೆದಿಲ್ಲ. ಅವರು ರಾಜಕೀಯ ನಿವೃತ್ತಿ ಹೊಂದಿದ್ದು, ಹೀಗಾಗಿ ಹೆಚ್ಚು ಮಾತನಾಡಿಲ್ಲ. ರಾಜಕೀಯವಾಗಿ ಅವರು ಬಿಜೆಪಿಗೆ ಸೇರಿದ್ದರು ಅಷ್ಟೇ. ನಾನು ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಅಷ್ಟೇ ಎಂದು ಸಿಎಂ ಹೇಳಿದರು.
ಜೊತೆಯಲ್ಲಿ ಶಾಸಕರಾದ ಎ.ಆರ್ ಕೃಷ್ಣಮೂರ್ತಿ, ಹರೀಶ್ ಗೌಡ ಸೇರಿದಂತೆ ಇತರರು ಹಾಜರಿದ್ದರು.





