ಕೊಚ್ಚಿ: ಭಾನುವಾರದ ಪ್ರಾರ್ಥನೆ ವೇಳೆ ಪ್ರಾರ್ಥನಾ ಮಂದಿರದಲ್ಲಿ ಸರಣಿ ಸ್ಫೋಟ ಸಂಭವಿಸಿದ ಘಟನೆ ಕೇರಳ ರಾಜ್ಯದ ಕಲಮಸ್ಸೆರಿ ಎಂಬಲ್ಲಿ ನಡೆದಿದೆ. ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಸ್ಫೋಟದ ಸದ್ದು ಕೇಳಿದ್ದಾಗಿ ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೇರಳ ರಾಜ್ಯದ ಕೊಚ್ಚಿಯಿಂದ 10 ಕಿ. ಮೀ. ದೂರದಲ್ಲಿ ಇರುವ ಕಲಮಸ್ಸೆರಿ ಎಂಬಲ್ಲಿ ಇರುವ ಜೆಹೋವಾಸ್ ವಿಟ್ನೆಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಇದು ಕ್ರೈಸ್ತರ ಒಂದು ಪಂಗಡದ ಪ್ರಾರ್ಥನಾ ಮಂದಿರವಾಗಿದೆ. ಇಲ್ಲಿ ಭಾನುವಾರದ ಪ್ರಾರ್ಥನೆ ನಡೆಯುತ್ತಿತ್ತು. ಪ್ರಾರ್ಥನೆಯ ಮಧ್ಯದಲ್ಲೇ ಸ್ಫೋಟ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸುಮಾರು 2 ಸಾವಿರ ಮಂದಿ ಈ ಪ್ರಾರ್ಥನಾ ಮಂದಿರಕ್ಕೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸ್ಫೋಟ ಸಂಭವಿಸಿದ ಕೂಡಲೇ ಪ್ರಾರ್ಥನೆ ನಡೆಸುತ್ತಿದ್ದವರು ಪ್ರಾರ್ಥನಾ ಮಂದಿರದಿಂದ ಹೊರಗೆ ಓಡಿ ಬಂದರು. ಪ್ರಾರ್ಥನಾ ಮಂದಿರದ ಒಳಗೆ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಸ್ಫೋಟ ಸಂಭವಿಸಿದ ವೇಳೆ ಓರ್ವ ಗಾಯಗೊಂಡು 23 ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿದೆ.
ಒಟ್ಟು ಮೂರು ಬಾರಿ ಸ್ಫೋಟ ಸಂಭವಿಸಿತು ಎಂದು ಪ್ರಾರ್ಥನಾ ಮಂದಿರದಲ್ಲಿ ಇದ್ದವರು ಹಾಗೂ ಈ ಪ್ರಾರ್ಥನಾ ಮಂದಿರದ ಅಕ್ಕಪಕ್ಕದ ಮನೆಗಳ ನಿವಾಸಿಗಳು ತಿಳಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಸ್ಫೋಟ ಘಟನೆಯನ್ನು ದುರಾದೃಷ್ಟಕರ ಎಂದು ಹೇಳಿದ್ದಾರೆ. ತಮ್ಮ ಸರ್ಕಾರ ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ರೀತಿಯಲ್ಲಿ ನಿಭಾಯಿಸಲಿದೆ ಎಂದು ತಿಳಿಸಿದ್ದಾರೆ. ಕೇರಳ ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳೂ ಘಟನಾ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.
ಕೇರಳ ರಾಜ್ಯದ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಅವರು ಸರ್ಕಾರಿ ಆಸ್ಪತ್ರೆಗಳ ಎಲ್ಲಾ ಸಿಬ್ಬಂದಿಗೆ ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ. ಭಾನುವಾರವಾದ್ದರಿಂದ ಬಹುತೇಕರು ರಜೆಯಲ್ಲಿದ್ದರು. ಆದರೆ ಸ್ಫೋಟದಂಥಾ ಗಂಭೀರ ಸನ್ನಿವೇಶ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ವೈದ್ಯರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ.





