Mysore
25
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಕೇರಳದಲ್ಲಿ ಸರಣಿ ಸ್ಫೋಟ: ಪಿಣರಾಯಿ ವಿಜಯನ್ ಜೊತೆ ಅಮಿತ್ ಶಾ ತುರ್ತು ಮಾತುಕತೆ

ನವದೆಹಲಿ : ಕೇರಳದ ಕೊಚ್ಚಿಯಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರದಲ್ಲಿ ಭಾನುವಾರದ ಪ್ರಾರ್ಥನೆ ವೇಳೆ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆ ತುರ್ತು ಮಾತುಕತೆ ನಡೆಸಿದ್ದಾರೆ. ಕೇರಳ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಕೇಂದ್ರದ ತನಿಖಾ ತಂಡಗಳ ನೆರವಿನ ಕುರಿತಾಗಿ ಉಭಯ ನಾಯಕರು ವಿಚಾರ ವಿಮರ್ಶೆ ನಡೆಸಿದ್ದಾರೆ.

ರಾಷ್ಟ್ರೀಯ ಭದ್ರತಾ ಪಡೆ ಎನ್‌ಎಸ್‌ಜಿ ಹಾಗೂ ರಾಷ್ಟ್ರೀಯ ತನಿಖಾ ದಳ ಎನ್‌ಐಎ ಸಿಬ್ಬಂದಿಗೆ ಈ ಕೂಡಲೇ ಕೇರಳ ರಾಜ್ಯಕ್ಕೆ ಧಾವಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ. ಕೇಂದ್ರದ ಈ ತಂಡಗಳು ಕೇರಳ ರಾಜ್ಯ ಸರ್ಕಾರಕ್ಕೆ ಹಾಗೂ ಕೇರಳ ಪೊಲೀಸರಿಗೆ ತನಿಖೆ ವೇಳೆ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ನೆರವು ನೀಡಲಿವೆ.

ಸ್ಫೋಟ ಘಟನೆಯ ಸುದ್ದಿ ತಿಳಿದ ಕೂಡಲೇ ಕೇರಳ ಮುಖ್ಯಮಂತ್ರಿಗಳಿಗೆ ಅಮಿತ್ ಶಾ ದೂರವಾಣಿ ಕರೆ ಮಾಡಿದರು ಎಂದು ತಿಳಿದು ಬಂದಿದೆ. ಈ ವೇಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಘಟನೆ ಕುರಿತ ಸಮಗ್ರ ಮಾಹಿತಿ ನೀಡಿದ್ದಾರೆ. ಈ ವೇಳೆ ಸರ್ಕಾರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತಾಗಿ ಪಿಣರಾಯಿ ವಿಜಯನ್ ಅವರ ಜೊತೆ ಅಮಿತ್ ಶಾ ಅವಲೋಕನ ನಡೆಸಿದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಕೇರಳ ರಾಜ್ಯದ ಕೊಚ್ಚಿ ನಗರದಿಂದ 10 ಕಿ. ಮೀ. ದೂರದಲ್ಲಿ ಇರುವ ಕಲಮಸ್ಸೆರಿ ಎಂಬಲ್ಲಿ ಕ್ರೈಸ್ತರ ಒಂದು ಪಂಗಡಕ್ಕೆ ಸೇರಿದ ಪ್ರಾರ್ಥನಾ ಮಂದಿರದಲ್ಲಿ ಭಾನುವಾರದ ಪ್ರಾರ್ಥನೆ ನಡೆಯುತ್ತಿತ್ತು. ಈ ವೇಳೆ ಪ್ರಾರ್ಥನಾ ಮಂದಿರದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು ಎಂಬ ಮಾಹಿತಿ ಇದೆ. ಪ್ರಾರ್ಥನೆ ಆರಂಭ ಆದ ಕೂಡಲೇ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಮೂರು ಬಾರಿ ಸ್ಫೋಟದ ಸದ್ದು ಕೇಳಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಸರಣಿ ಸ್ಫೋಟದಲ್ಲಿ ಕನಿಷ್ಟ ಓರ್ವ ಸಾವನ್ನಪ್ಪಿದ್ದು, ಗಾಯಾಳುಗಳ ಸಂಖ್ಯೆ 35ಕ್ಕೆ ಏರಿಕೆ ಆಗಿದೆ. ಪ್ರಾರ್ಥನೆ ನಡೆಯುತ್ತಿದ್ದ ವೇಳೆಯಲ್ಲೇ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರಾರ್ಥನಾ ಮಂದಿರದಲ್ಲಿ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿತು. ಈ ವೇಳೆ ಜನರು ಒಮ್ಮೆಲೇ ಪ್ರಾರ್ಥನಾ ಮಂದಿರದಿಂದ ಹೊರಗೆ ಓಡಿ ಬಂದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಹತ್ತಾರು ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ.

ಇನ್ನು ಇದು ಯಾವ ರೀತಿಯ ಸ್ಫೋಟ ಅನ್ನೋದ್ರ ಕುರಿತಾಗಿ ಸ್ಪಷ್ಟ ಚಿತ್ರಣ ಇನ್ನಷ್ಟೇ ಹೊರ ಬೀಳಬೇಕಿದೆ. ಈ ಕುರಿತಾಗಿ ಎನ್‌ಐಎ ಸಮಗ್ರ ತನಿಖೆ ನಡೆಯಲಿದೆ. ಇದು ಭಯೋತ್ಪಾದಕರ ಕೃತ್ಯವೇ ಅನ್ನೋ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಆದರೆ, ಸರ್ಕಾರ ಈ ಕುರಿತಾಗಿ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!