Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ರಾ ಸಂಸ್ಥೆಯ ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ರವಿ ಸಿನ್ಹಾ ನೇಮಕ!

ನವದೆಹಲಿ: ದೇಶದ ಬೇಹುಗಾರಿಕಾ ಸಂಸ್ಥೆ ರಾಗೆ ಹೊಸ ಮುಖ್ಯಸ್ಥರು ನೇಮಕವಾಗಿದ್ದಾರೆ. ಛತ್ತೀಸ್‌ಗಢ ಕೇಡರ್‌ನ ಹಿರಿಯ ಐಪಿಎಸ್‌ ಅಧಿಕಾರಿ ರವಿ ಸಿನ್ಹಾ ಅವರನ್ನು ರಾ (RAW) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಎರಡು ವರ್ಷಗಳ ಅವಧಿಗೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಕಾರ್ಯದರ್ಶಿಯನ್ನಾಗಿ ರವಿ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಪ್ರಸ್ತುತ ರಾ ಮುಖ್ಯಸ್ಥ ಸಮಂತ್‌ ಕುಮಾರ್‌ ಗೋಯಲ್‌ ಅವರ ನಾಲ್ಕು ವರ್ಷಗಳ ಅಧಿಕಾರಾವಧಿ ಜೂನ್‌ 30ರಂದು ಅಂತ್ಯವಾಗಲಿದೆ. ಅವರ ಬಳಿಕ ರವಿ ಸಿನ್ಹಾ ಅವರು ರಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಛತ್ತೀಸ್‌ಗಢ ಕೇಡರ್‌ನ 1988ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ ಅಧಿಕಾರಿಯಾಗಿರುವ ರವಿ ಸಿನ್ಹಾ ಅವರು ಪ್ರಸ್ತುತ ಕ್ಯಾಬಿನೆಟ್ ಸೆಕ್ರೆಟರಿಯಟ್‌ನಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಮಂತ್‌ ಗೋಯಲ್‌ ಬಳಿಕ ಎರಡು ವರ್ಷಗಳ ಅವಧಿಗೆ ರಾ ಕಾರ್ಯದರ್ಶಿಯಾಗಿ ರವಿ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ. ರವಿ ಸಿನ್ಹಾ ಅವರು ತಮ್ಮ ಕಾರ್ಯತಂತ್ರ ಹಾಗೂ ಬೇಹುಗಾರಿಕಾ ಕೌಶಲ್ಯಗಳಿಗೆ ಹೆಸರಾಗಿದ್ದು, ಈಗ ರಾ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

ಸಮಂತ್‌ ಗೋಯಲ್‌ ಯಶಸ್ವಿ!

ಹಾಲಿ ರಾ ಮುಖ್ಯಸ್ಥ ಸಮಂತ್‌ ಗೋಯಲ್‌ ತಮ್ಮ ಅವಧಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. 1984ರ ಪಂಜಾಬ್‌ ಕೇಡರ್‌ನ ಸಮಂತ್‌ ಕುಮಾರ್‌ ಗೋಯಲ್‌ ಜೂನ್‌ 2019ರಲ್ಲಿ ರಾ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಅನಿಲ್‌ ಧಾಸ್ಮನಾ ಬಳಿಕ ರಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಸಮಂತ್‌ ಗೋಯಲ್‌ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಬಾಲಾಕೋಟ್‌ ಏರ್‌ಸ್ಟ್ರೈಕ್‌ ಹಾಗೂ ಶಾಂತಿಯುತವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 380ನೇ ವಿಧಿ ರದ್ದು ಮಾಡಿರುವುದು ಮತ್ತು ಪಾಕಿಸ್ತಾನಿ ಹಾಗೂ ಖಲಿಸ್ತಾನಿ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿತ್ತು. ಇವರ ಅವಧಿಯನ್ನು ಕಳೆದ ವರ್ಷ ಒಂದು ವರ್ಷ ವಿಸ್ತರಿಸಲಾಗಿತ್ತು. ಈಗ ಗೋಯಲ್‌ ಬಳಿಕ ರವಿ ಸಿನ್ಹಾ ರಾ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

ಏನಿದು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW) ಸಂಸ್ಥೆ?

1968ರಲ್ಲಿ ರಾ ಏಜೆನ್ಸಿಯನ್ನು ಸ್ಥಾಪಿಸಲಾಗಿದ್ದು, ಭಾರತದ ಪ್ರಧಾನ ವಿದೇಶಿ ಗುಪ್ತಚರ ಸಂಸ್ಥೆಯಾಗಿದೆ. ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆ ಮೇಲೆ ಕಣ್ಣಿಡಲು ರಾ ಅನ್ನು ಪ್ರಾರಂಭಿಸಲಾಯಿತು. ಕಳೆದ ಕೆಲವು ದಶಕಗಳಲ್ಲಿ ರಾ ವ್ಯಾಪ್ತಿ ಜಗತ್ತಿನಾದ್ಯಂತ ವಿಸ್ತರಿತವಾಗಿದೆ. ಅಮೆರಿಕದ ಸಿಐಎ ಹಾಗೂ ಬ್ರಿಟನ್‌ನ ಎಂಐ6 ಸಂಸ್ಥೆಗಳಿಗಿಂತ ರಾ ಭಿನ್ನವಾಗಿದ್ದು, ರಕ್ಷಣಾ ಸಚಿವಾಲಯದ ಬದಲಾಗಿ ನೇರವಾಗಿ ಪ್ರಧಾನ ಮಂತ್ರಿಗಳಿಗೆ ರಾ ಸಂಸ್ಥೆ ವರದಿ ಮಾಡುತ್ತದೆ. ಇನ್ನು, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಸಂಸ್ಥೆಯ ಅಧಿಕಾರಗಳು ಮತ್ತು ಭಾರತದ ವಿದೇಶಾಂಗ ನೀತಿಯಲ್ಲಿ ಅದರ ಪಾತ್ರ ವಿವಿಧ ಪ್ರಧಾನ ಮಂತ್ರಿಗಳ ಅಡಿಯಲ್ಲಿ ಬದಲಾಗುತ್ತಾ ಸಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ