Mysore
20
overcast clouds
Light
Dark

ಸಲಿಂಗ ವಿವಾಹ : ಜೀವನ ಸಂಗಾತಿ ಆಯ್ಕೆ ಮಾಡುವುದು ಬದುಕಿನ ಅವಿಭಾಜ್ಯ ಅಂಗ ಎಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ನವದೆಹಲಿ : ಎಲ್ ಜಿಬಿಟಿ ಸಮುದಾಯದ ವ್ಯಕ್ತಿಗಳು (ಸಲಿಂಗಕಾಮಿಗಳು, ದ್ವಿಲಿಂಗಿ, ತೃತೀಯಲಿಂಗಿಗಳು) ಸೇರಿದಂತೆ ಎಲ್ಲಾ ವ್ಯಕ್ತಿಗಳು ತಮ್ಮ ಜೀವನದ ನೈತಿಕ ಗುಣಮಟ್ಟವನ್ನು ನಿರ್ಣಯಿಸುವ ಹಕ್ಕನ್ನು ಹೊಂದಿದ್ದಾರೆ. ಸ್ವಾತಂತ್ರ್ಯದ ಅರ್ಥವೆಂದರೆ ವ್ಯಕ್ತಿ ತಾನು ಬಯಸಿದ ಬದುಕನ್ನು ಬದುಕುವ ಸಾಮರ್ಥ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನದ ಹಾದಿಯನ್ನು ಆಯ್ಕೆ ಮಾಡುವ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಸಂವಿಧಾನ ವಿಧಿ 21 ರ ಅಡಿಯಲ್ಲಿ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಮೂಲಕ್ಕೆ ಹೋಗುತ್ತದೆ. ಒಂದು ಕೂಡಿಕೆ ಮಾಡಿಕೊಳ್ಳುವ ಹಕ್ಕನ್ನು ಸಹ ಆರ್ಟಿಕಲ್ 19(1)(ಇ) ನಲ್ಲಿ ಆಧಾರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಎಲ್ ಜಿಬಿಟಿ ಸಮುದಾಯದ ಸಂಬಂಧಗಳಿಗೆ, ಅಂತಹ ಒಕ್ಕೂಟಗಳಿಗೆ ಮನ್ನಣೆಯ ಅಗತ್ಯವಿದೆ. ಅವರಿಗೆ ಮೂಲಭೂತ ಸೌಲಭ್ಯಗಳು, ಅಗತ್ಯ ಸೇವೆಗಳನ್ನು ನಿರಾಕರಿಸುವಂತಿಲ್ಲ. ಈ ಸಮುದಾಯದವರ ಸ್ವಾತಂತ್ರ್ಯವನ್ನು ಪರೋಕ್ಷವಾಗಿ ಕೂಡ ಉಲ್ಲಂಘಿಸಲು ಸಾಧ್ಯವಿಲ್ಲ, ಅವರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ತೀರ್ಪನ್ನು ಪ್ರಕಟಿಸಿದೆ.

ಸಲಿಂಗ ಜೋಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ಪೊಲೀಸರಿಗೆ ಸೂಚಿಸಿದರು, ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಲಿಂಗ ಸಮುದಾಯದ ವಿರುದ್ಧ ತಾರತಮ್ಯ ಮಾಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ