ಚೆನ್ನೈ : ಟೊಮೆಟೊ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ತಮಿಳುನಾಡು ಸರ್ಕಾರ, ಪ್ರತಿ ಕೆ.ಜಿ.ಗೆ – 60 ರಂತೆ ನಗರದ 82 ನ್ಯಾಯಬೆಲೆ ಅಂಗಡಿಗಳಲ್ಲಿ ಇಂದಿನಿಂದ ಮಾರಾಟ ಆರಂಭಿಸಿದೆ.
ಅಗತ್ಯಬಿದ್ದರೆ ಈ ಕ್ರಮವನ್ನು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಸಹಕಾರ ಸಚಿವ ಕೆ.ಆರ್.ಪರಿಯಕರುಪ್ಪನ್ ತಿಳಿಸಿದ್ದಾರೆ.
ಸದ್ಯದ ಕ್ರಮವು ಚೆನ್ನೈ, ಕೊಯಮತ್ತೂರು, ಸೇಲಂ, ಈರೋಡ್ ಮತ್ತು ವೆಲ್ಲೂರ್‌ನಲ್ಲಿರುವ ‘ತಾಜಾ ಕೃಷಿ ಮಳಿಗೆ’ಗಳಲ್ಲಿಯೂ ಟೊಮೆಟೊ – 60ಕ್ಕೆ ಲಭ್ಯವಾಗುವಂತೆ ಮಾಡಿದೆ ಎಂದೂ ಅವರು ಹೇಳಿದ್ದಾರೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಟೊಮೆಟೊ ಮಾರಾಟ ಮಾಡುವ ತೀರ್ಮಾನವನ್ನು ಸೋಮವಾರ ಸಂಜೆ ನಡೆದ ಸಭೆಯಲ್ಲಿ ಕೈಗೊಳ್ಳಲಾಯಿತು. ರಾಜ್ಯದಲ್ಲಿ ಟೊಮೆಟೊ ಬೆಳೆಯುವ ಪ್ರದೇಶಗಳನ್ನು ಗುರುತಿಸಿ, ರೈತರು ರಾಜ್ಯದ ಗ್ರಾಹಕರಿಗೆ ಯಾವುದೇ ತಡೆ ಇಲ್ಲದೆ ಸರಬರಾಜು ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಸಹಕಾರ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ನೆರೆ ರಾಜ್ಯಗಳಿಂದ ಟೊಮೆಟೊ ಬೆಳೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣ. ಚೆನ್ನೈನ ಪಕ್ಕದ ನಗರ ಕೊಯಂಬೆದು ವೋಲ್‌ಸೇಲ್ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಟೊಮೆಟೊ ಬೆಲೆ 110 ರೂ ಆಗಿದೆ. ಕೆಲ ಪ್ರದೇಶಗಳಲ್ಲಿ ಇದಕ್ಕಿಂತಲೂ ಹೆಚ್ಚಾಗಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.