Mysore
20
overcast clouds
Light
Dark

ಸತತ ನಾಲ್ಕನೇ ಬಾರಿ ರೆಪೊ ದರ ಯಥಾಸ್ಥಿತಿ: ಆರ್‌ಬಿಐ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್  ತನ್ನ ಪ್ರಮುಖ ಸಾಲದ ದರವನ್ನು ಅಂದರೆ ರೆಪೊ ದರವನ್ನು ಸತತ ನಾಲ್ಕನೇ ಬಾರಿಗೆ ಶೇಕಡಾ 6.5ರಷ್ಟು ಬದಲಾಯಿಸದೆ ಹಾಗೆ ಉಳಿಸಲು ನಿರ್ಧರಿಸಿದೆ. ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದರೆ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಸಾಲದ ಬಡ್ಡಿದರಗಳು ಬದಲಾಗದೆ ಉಳಿಯುವ ಸಾಧ್ಯತೆಯಿದೆ. ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳಂತಹ ಕೆಲವು ಪ್ರಮುಖ ಬೆಳೆಗಳಿಗೆ ಖಾರಿಫ್ ಬಿತ್ತನೆಯ ಕುಸಿತ, ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಮತ್ತು ಜಾಗತಿಕ ಆಹಾರ ಮತ್ತು ಇಂಧನ ಬೆಲೆಗಳಲ್ಲಿನ ಚಂಚಲತೆಯಿಂದ ಒಟ್ಟಾರೆ ಹಣದುಬ್ಬರ ದೃಷ್ಟಿಕೋನವು ಅನಿಶ್ಚಿತತೆಯಿಂದ ಮುಚ್ಚಿಹೋಗಿದೆ ಎಂದು ಕೂಡ ಶಕ್ತಿಕಾಂತ್ ದಾಸ್ ತಿಳಿಸಿದರು.

ಸೆಪ್ಟೆಂಬರ್‌ ತಿಂಗಳಲ್ಲಿ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದರು. ಆದರೆ ಒಟ್ಟಾರೆ ದೃಷ್ಟಿಕೋನವು ಅನಿಶ್ಚಿತತೆಗಳಿಂದ ಮಸುಕಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು 5.4% ಮತ್ತು ಮುಂದಿನ ಹಣಕಾಸು ವರ್ಷದಲ್ಲಿ 5.2% ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದರು.

ಆದಾಗ್ಯೂ, ಪ್ರಸಕ್ತ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಆಹಾರ ಹಣದುಬ್ಬರವು ನಿರಂತರವಾದ ಇಳಿಕೆಯನ್ನು ಕಾಣುವುದಿಲ್ಲ ಎಂದು ಅಂದಾಜಿಸಲಾಗಿದೆ.

ಆಗಸ್ಟ್‌ನಲ್ಲಿ ಹಣದುಬ್ಬರವು 6.83% ತಲುಪಿದ ಹಿನ್ನೆಲೆಯಲ್ಲಿ ಎಂಪಿಸಿ ಸಭೆ ನಡೆಸಲಾಯಿತು. ಪ್ರಸ್ತುತ ತಿಂಗಳ ಅಂಕಿಅಂಶವನ್ನು ಮುಂದಿನ ವಾರ ನಿರೀಕ್ಷಿಸಲಾಗಿದೆ. ಚಿಲ್ಲರೆ ಹಣದುಬ್ಬರವನ್ನು ಎರಡೂ ಕಡೆಗಳಲ್ಲಿ 2% ನಷ್ಟು ಮಾರ್ಜಿನ್‌ನೊಂದಿಗೆ 4% ನಲ್ಲಿ ಇರಿಸಿಕೊಳ್ಳಲು ಸರ್ಕಾರವು ಕೇಂದ್ರೀಯ ಬ್ಯಾಂಕ್‌ಗೆ ಆದೇಶಿಸಿದೆ.

ಹಠಾತ್ ಆಹಾರ ಮತ್ತು ಇಂಧನ ಬೆಲೆ ಏರಿಕೆಯನ್ನು ನಿಭಾಯಿಸಲು ವಿತ್ತೀಯ ನೀತಿಯು ಸಂಪೂರ್ಣ ಸಿದ್ಧತೆಯಲ್ಲಿರಬೇಕು. ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ದೇಶೀಯ ಆರ್ಥಿಕತೆಯು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ ಎಂದು ಹೇಳಿದರು.ಭಾರತವು ವಿಶ್ವದ ಹೊಸ ಬೆಳವಣಿಗೆಯ ಸೂತ್ರಧಾರನಾಗಲು ಸಜ್ಜಾಗಿದೆ. ಆರ್ ಬಿಐ ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.5ರಲ್ಲಿ ಉಳಿಸಿಕೊಂಡಿದೆ.

ರೆಪೊ ದರ : ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.

ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಿವರ್ಸ್ ರೆಪೊ ದರ : ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ