ಬೆಂಗಳೂರು : ರಾಜ್ಯದಲ್ಲಿ ವರ್ಗಾವಣೆ ವಿಷಯದಲ್ಲಿ ಯಾವುದೇ ದಂಧೆ ನಡೆಯುತ್ತಿಲ್ಲ. ಆಧಾರ ರಹಿತ ಆರೋಪ ಮಾಡಬಾರದು, ಧೈರ್ಯವಿದ್ದರೆ ಸಾಕ್ಷಿ ಬಿಡುಗಡೆ ಮಾಡಿ ಎಂದು ಮಾಜಿ ಶಾಸಕ ಯತೀಂದ್ರ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹೀನಾಯವಾಗಿ ಸೋಲು ಕಂಡಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದಿದೆ. ಈ ಮೊದಲು ಬಿಜೆಪಿಯವರು ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿರಲಿಲ್ಲ. ಕಾಂಗ್ರೆಸ್‍ನವರು ಅದೇ ರೀತಿ ಮಾಡುತ್ತಾರೆ ಎಂದುಕೊಂಡಿದ್ದರು ಎಂದು ಹೇಳಿದರು.
ಆದರೆ ನಮ್ಮ ಸರ್ಕಾರ ಹಂತಹಂತವಾಗಿ ಒಂದೊಂದೆ ಗ್ಯಾರಂಟಿಗಳನ್ನು ಈಡೇರಿಸುತ್ತಿದೆ. ಇದರಿಂದ ಹತಾಶರಾಗಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆಂದು ಅಸಾಮಾಧನ ವ್ಯಕ್ತಪಡಿಸಿದರು.ಈ ಹಿಂದೆಯೂ ಕೂಡ ಕುಮಾರಸ್ವಾಮಿಯವರು ಸಾಕಷ್ಟು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಡಿ.ಕೆ.ರವಿ ಅವರ ಅಸಹಜ ಸಾವಾದಾಗ ಮುಖ್ಯಮಂತ್ರಿಯಾಗಿದ್ದ ತಮ್ಮ ತಂದೆ ಸಿದ್ದರಾಮಯ್ಯ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ನೋಡಲು ಹೋಗಿದ್ದರು. ಆಗ ಫೋರೆನ್ಸಿಕ್ ವರದಿ ತಿರುಚಲು ಹೋಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು ಎಂದು ಹೇಳಿದರು.
ವರ್ಗಾವಣೆ ದಂಧೆ ನಡೆಯುತ್ತಿದೆ. ಯತೀಂದ್ರ ಅವರಿಗೆ ಸೇರಿದ ಆಡಿಯೋ ಸಾಕ್ಷಿ ಇದೆ ಎಂಬೆಲ್ಲಾ ವದಂತಿಗಳ ಬಗ್ಗೆ ಪ್ರಶ್ನಿಸಿದಾಗ ಅಸಮಾಧನ ವ್ಯಕ್ತಪಡಿಸಿದ ಯತೀಂದ್ರ ಅವರು ಯಾರ ಆಡಿಯೋ ಧೈರ್ಯ ಇದ್ದರೆ ಬಿಡುಗಡೆ ಮಾಡಲು ಹೇಳಿ, ನನ್ನದಂತೂ ಆಡಿಯೋ ಇಲ್ಲ. ಯಾವ ವರ್ಗಾವಣೆ ದಂಧೆಯೂ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.





