Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಐಎಸ್‌ಐ ಜೊತೆ ಸೇರಿ ಅತ್ಯಾಚಾರ ಮತ್ತು ಕೊಲೆ ಸುಳ್ಳು ವರದಿ: ಕಾಶ್ಮೀರದ ಇಬ್ಬರು ವೈದ್ಯರು ವಜಾ

ಶ್ರೀನಗರ: 2009 ರಲ್ಲಿ ಶೋಪಿಯಾನ್‌ನಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಯುವ ಕಾಶ್ಮೀರಿ ಮಹಿಳೆಯರ ಪೋಸ್ಟ್‌ ಮಾರ್ಟಮ್ ವರದಿಯನ್ನು ಸುಳ್ಳು ಮಾಡಲು ಪಾಕಿಸ್ತಾನದ ಐಎಸ್‌ಐ ಜೊತೆ ಸಂಚು ರೂಪಿಸಿದ ಮತ್ತು ಅವರ ಸಾವಿಗೆ ಅತ್ಯಾಚಾರ ಮತ್ತು ಕೊಲೆ ಕಾರಣ ಎಂದು ಬಿಂಬಿಸಿದ ಇಬ್ಬರು ವೈದ್ಯರನ್ನು ಕಾಶ್ಮೀರ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.

ನೀರಿನಲ್ಲಿ ಮುಳುಗಿ ಸಂಭವಿಸಿದ ಇಬ್ಬರು ಮಹಿಳೆಯರ ಆಕಸ್ಮಿಕ ಸಾವನ್ನು, ಅತ್ಯಾಚಾರ ಮತ್ತು ಕೊಲೆ ಎಂದು ಸುಳ್ಳು ಮರಣೋತ್ತರ ಪರೀಕ್ಷೆಯ ವರದಿಯನ್ನು ಸಲ್ಲಿಸಿದ್ದಾರೆ. ನಕಲಿ ಸಾಕ್ಷ್ಯ ಮತ್ತು ವಂಚನೆಯಿಂದ ತಿರುಚಿದ್ದಕ್ಕಾಗಿ ಡಾ.ನಿಘತ್ ಶಾಹೀನ್ ಚಿಲೂ ಮತ್ತು ಡಾ.ಬಿಲಾಲ್ ಅಹ್ಮದ್ ದಲಾಲ್ ವಿರುದ್ಧ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ.

ಜಮ್ಮು ಕಾಶ್ಮೀರ: ಇಬ್ಬರು ವೈದ್ಯರು ಸೇವೆಯಿಂದ ವಜಾ

ಅತ್ಯಾಚಾರ ಮತ್ತು ಕೊಲೆ ಆರೋಪಗಳೆಲ್ಲವೂ ಸುಳ್ಳು ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ಆರು ವೈದ್ಯರು, ಐವರು ವಕೀಲರು ಮತ್ತು ಇಬ್ಬರು ನಾಗರಿಕರು ಸೇರಿದಂತೆ 13 ಮಂದಿ, ಸರ್ಕಾರ, ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ದೂಷಿಸಲು ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ಶಾಮೀಲಾಗಿ ಕಣಿವೆಯಲ್ಲಿ ಭಾರಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸಲು ಸಂಚು ರೂಪಿಸಿದ್ದಾರೆ ಎಂದು ಸಿಬಿಐ ಹೇಳಿದೆ.

ಕಾಶ್ಮೀರದಲ್ಲಿ ಕೋಲಾಹಲ: ಈ ಘಟನೆಯು ಕಾಶ್ಮೀರ ಕಣಿವೆಯಾದ್ಯಂತ ಏಳು ತಿಂಗಳ ಕಾಲ ಬೀದಿ ಪ್ರಕ್ಷುಬ್ಧತೆಯನ್ನು ಉಂಟು ಮಾಡಿತು. ಪೊಲೀಸರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ ಎಂದು ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳು ಹೇಳಿಕೊಂಡರು. ಪೊಲೀಸ್ ಮತ್ತು ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಕನಿಷ್ಠ ಏಳು ನಾಗರಿಕರು ಕೊಲ್ಲಲ್ಪಟ್ಟರು. ನೂರಾರು ಜನರು ಗಾಯಗೊಂಡರು. ರಾಜ್ಯದ ಆರ್ಥಿಕತೆ 6,000 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಬದ್ಗಾಮ್‌ನ ಉಪ ಜಿಲ್ಲಾ ಆಸ್ಪತ್ರೆ ಚದೂರದಲ್ಲಿ ನಿಯೋಜನೆಗೊಂಡಿರುವ ಸ್ತ್ರೀರೋಗತಜ್ಞ, ಸಮಾಲೋಚಕ ಡಾ.ನಿಘಾತ್ ಶಾಹೀನ್ ಚಿಲೂ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿದ್ದಾರೆ. ಅವರ ಜೊತೆ ಡಾ ಬಿಲಾಲ್ ಅಹ್ಮದ್ ದಲಾಲ್ ಅವರನ್ನು ವಜಾಗೊಳಿಸಲು ಆದೇಶ ಹೊರಡಿಸಲಾಗಿದೆ.

ವಿಚಾರಣೆಯಿಲ್ಲದೆ ಸರ್ಕಾರಿ ನೌಕರನನ್ನು ವಜಾಗೊಳಿಸಲು ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರ ನೀಡುವ ಭಾರತದ ಸಂವಿಧಾನದ 311 ನೇ ವಿಧಿಯ ಉಪ ಷರತ್ತು (ಸಿ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ಆದೇಶದ ಪ್ರಕಾರ, ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ಡಾ ನಿಘತ್ ಶಾಹೀನ್ ಚಿಲೂ ವಿರುದ್ಧ ತನಿಖೆ ನಡೆಸುವುದು ಉಚಿತವಲ್ಲ ಎಂದು ಹೇಳಲಾಗಿದೆ.

ಏನಿದು ಘಟನೆ?: ಇಬ್ಬರು ಮಹಿಳೆಯರು, ತಮ್ಮ ಹೊಲಗಳಿಂದ ಹಿಂತಿರುಗುತ್ತಿದ್ದಾಗ, 29 ಮೇ 2009 ರಂದು ರಾಂಬಿಯಾರ ನಾಲಾದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಘಟನೆ ಇಡೀ ಕಣಿವೆಯಲ್ಲಿ ಪ್ರಕ್ಷುಬ್ಧತೆ ಹರಡಿತು. ಒಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಸರ್ಕಾರವು ಪ್ರತ್ಯೇಕತಾವಾದಿಗಳ ಒತ್ತಡಕ್ಕೆ ಮಣಿದು, ಶೋಪಿಯಾನ್‌ನ ಆಗಿನ ಎಸ್‌ಎಸ್‌ಪಿ ಜಾವೇದ್ ಇಕ್ಬಾಲ್ ಮಾಟೂ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತು. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿತು. ನಂತರ, ಸರ್ಕಾರವು ವಿವರವಾದ ಅಪರಾಧ ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ ಪ್ರಕರಣವನ್ನು ವರ್ಗಾಯಿಸಿತು.

ಈ ಘಟನೆಯನ್ನು ಖಂಡಿಸಿ 42 ಪ್ರತಿಭಟನೆಗಳು ನಡೆದವು. 600 ಕ್ಕೂ ಹೆಚ್ಚು ಕಾನೂನು ಸುವ್ಯವಸ್ಥೆ ಉಲ್ಲಂಘಿಸುವ ಘಟನೆಗಳು ವರದಿಯಾದವು. 7 ನಾಗರೀಕರು ಮೃತಪಟ್ಟಿದ್ದಾರೆ. 35 ಪೊಲೀಸ್ ಅಧಿಕಾರಿಗಳು ಸೇರಿದಂತೆ 135 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ