ರಾಮನಗರ : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತೆ ಸಾಧಾರಣ ಮಳೆಗೆ ಹೆದ್ದಾರಿಯ ಸರ್ವಿಸ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ನೆನ್ನೆ ಸಂಜೆ ಸುರಿದ ಮಳೆಯಿಂದಾಗಿ ಸರ್ವಿಸ್ ರಸ್ತೆ ಕೆರೆಯಂತಾಗಿ ವಾಹನ ಸವಾರರು ಪರದಾಡಿದ್ದು, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಬಾರಿ ಮಳೆಬಂದಾಗಲೂ ಅವ್ಯವಸ್ಥೆಯ ಆಗರವಾಗುವ ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆ ಮತ್ತೆ ಜಲಾವೃತವಾಗಿ ಅವೈಜ್ಞಾನಿಕ ಕಾಮಗಾರಿಗೆ ಕನ್ನಡಿ ಹಿಡಿದಿದೆ. ಶುಕ್ರವಾರ ಸುರಿದ ಸಾಧಾರಣ ಮಳೆಯಿಂದಾಗಿ ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆ ಕೆರೆಯಂತಾಗಿದೆ. ರಾಮನಗರ ಸಮೀಪದ ಕೆಂಪನಹಳ್ಳಿ ಗೇಟ್‌ನಿಂದ, ಕಲ್ಲುಗೋಪಹಳ್ಳಿ, ದಾಸಪ್ಪನದೊಡ್ಡಿ ಬಳಿ ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ದ್ವಿಚಕ್ರ ಹಾಗೂ ಇತರ ಸಣ್ಣಪುಟ್ಟ ವಾಹನಗಳು ರಸ್ತೆ ದಾಟಲಾಗದೇ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೆಂಗಳೂರು-ಮೈಸೂರು ಹೆದ್ದಾರಿಯು ಸಂಚಾರಕ್ಕೆ ಮುಕ್ತವಾದಾಗಿನಿಂದಲೂ ಇದೇ ಸಮಸ್ಯೆ ಇದೆ. ಕಳೆದ ವರ್ಷ ಮಳೆಗಾಲದಲ್ಲಿ ಭಾರೀ ಪ್ರಮಾಣದ ನೀರು ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ಎರಡೂ ಕಡೆ ನೀರು ನಿಂತು, ವಾಹನಗಳು ಸಹ ಜಲಾವೃತಗೊಂಡಿದ್ದವು. ಇದೀಗ, ಅಕಾಲಿಕ ಮಳೆಗೆ ಸರ್ವಿಸ್ ರಸ್ತೆಯಲ್ಲಿ ನೀರು ನಿಂತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ವಿಸ್ ರಸ್ತೆ ಸಂಪೂರ್ಣ ಅವೈಜ್ಞಾನಿಕ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಒಟ್ಟಾರೆ ಪ್ರತಿಬಾರಿ ಮಳೆ ಬಂದಾಗಲೂ ಸರ್ವಿಸ್ ರಸ್ತೆಯ ಸಂಚಾರ ಅಪಾಯಕ್ಕೆ ಆಹ್ವಾನ ನೀಡುತ್ತದೆ. ದುಬಾರಿ ಟೋಲ್ ವಸೂಲಿ ಮಾಡೋ ಹೆದ್ದಾರಿ ಪ್ರಾಧಿಕಾರ ಸರ್ವಿಸ್ ರಸ್ತೆಯನ್ನು ಸಂಪೂರ್ಣ ಮರೆತಂತಿದೆ.





