ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣನಂತೆ ಬಿಂಬಿಸಿ, ನವಯುಗದ ರಾವಣ ಎಂದು ಬಿಜೆಪಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.
ಈ ವಿವಾದಾತ್ಮಕ ಪೋಸ್ಟರ್‌ನ್ನು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ (ಟ್ವಿಟ್ಟರ್) ಹಂಚಿಕೊಂಡಿದೆ. ಈ ಟ್ವೀಟ್ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಪೋಸ್ಟರ್‌ನಲ್ಲಿ ಬಿಜೆಪಿ, ರಾವಣ, ಕಾಂಗ್ರೆಸ್ ಪಕ್ಷದ ನಿರ್ಮಾಣ, ಜಾರ್ಜ್ ಸೊರೊಸ್ ನಿರ್ದೇಶನ ಎಂದು ಬರೆದಿದೆ. ಅಲ್ಲದೇಕ ಚಿತ್ರದಲ್ಲಿ ರಾವಣನಂತೆಯೇ ರಾಹುಲ್ ಗಾಂಧಿಯವರಿಗೆ ಬಹು ತಲೆಗಳನ್ನು ಬಿಡಿಸಲಾಗಿದ್ದು, ರಾವಣನಂತೆ ರಕ್ಷಾಕವಚವನ್ನು ಧರಿಸಿರುವುದನ್ನು ತೋರಿಸಲಾಗಿದೆ.
ಇದರ ಜೊತೆ ಹೊಸ ಯುಗದ ರಾವಣ ಬರೆಯಲಾಗಿದೆ. ಅವನು ದುಷ್ಟ, ಧರ್ಮ ವಿರೋಧಿ, ರಾಮನ ವಿರೋಧಿ ಮತ್ತು ಅವನ ಗುರಿ ಭಾರತವನ್ನು ನಾಶಮಾಡುವುದು ಎಂದು ಬಿಜೆಪಿ ಬರೆದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಬಿಜೆಪಿ ಈ ರೀತಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.