ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿನ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಭಾರೀ ಸಂಚಲನ ಉಂಟು ಮಾಡಿತ್ತು. ಈ ಕುರಿತು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿದ್ದು, ಬೆಂಗಳೂರು ಕೇಂದ್ರದಲ್ಲೇ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್‌ಐ, ಸಿಐಟಿ ಪರೀಕ್ಷೆಯಲ್ಲಿ ಪತ್ರಿಕೆ ಸೋರಿಕೆ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ಅಕ್ರಮ ನಡೆದಿದ್ದೇ ಆದರೆ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿನಲ್ಲಿಯೇ ಪಿಎಸ್‌ಐ ನೇಮಕ ಪರೀಕ್ಷೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಸಿದಂತೆ ಗುಪ್ರಚರ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ. ಮಾಹಿತಿ ಪಡೆಯುವಾಗ ಆಡಿಯೋ ಬೆಳಕಿಗೆ ಬಂದಿದೆ. ಮಾಹಿತಿ ಕಲೆ ಹಾಕಲು ಫೇಕ್ ಆಡಿಯೋ ಮಾಡಿದ್ದೆ ಅಂತ ಪಿಎಸ್ಐ ಲಿಂಗಯ್ಯ ಹೇಳಿದ್ದಾರೆ. ಆಡಿಯೋ ಸತ್ಯನಾ, ಅಲ್ವಾ ಅನ್ನೋದರ ಬಗ್ಗೆ ಸಿಸಿಬಿ ತನಿಖೆ ಮಾಡುತ್ತಿದೆ ಎಂದು ವಿವರಿಸಿದ್ದಾರೆ.
ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ, ಕೇಂದ್ರಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಮೊದಲನೇ ಹಂತದಲ್ಲಿ ಸಮಿತಿ ರಚನೆ ಮಾಡಿದ್ದಾರೆ. ಅದರಿಂದ ಸಂವಿಧಾನ ತಿದ್ದುಪಡಿ ಆಗಲಿದೆಯಾ ಅಥವಾ ಇಲ್ಲವಾ ಎಂಬ ವರದಿ ನೀಡುತ್ತಾರೆ. ಸಮಿತಿಯ ಸದಸ್ಯರ ಶಿಫಾರಸ್ಸು ಏನೆಂದು ನೋಡಬೇಕು ಎಂದರು.
ಲೋಕಸಭಾ ಚುನಾವಣೆಗೆ ಸಚಿವರ ಸ್ಪರ್ಧೆ ವಿಚಾರವಾಗಿ, ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಅದರಲ್ಲಿ ನಮ್ಮ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರು ಬಂದಿದ್ದರು. ನಮಗೆ ಕೊಟ್ಟಿರುವ ಜವಾಬ್ದಾರಿಗಳ ಮೇಲೆ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದ್ದೇವೆ ಎಂದು ಮಾಹಿತಿ ನೀಡಿದರು.