ಸುಮಾರು 310 ಕೋಟಿ ಆದಾಯವಿದ್ದರೂ ಶಬರಿಮಲೆ ಅವ್ಯವಸ್ಥೆಯ ತಾಣವಾಗಿದೆ. ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.
ಕಳೆದ ವರ್ಷ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 310 ಕೋಟಿ ರೂಪಾಯಿಗೂ ಅಧಿಕ ಆದಾಯ ಬಂದಿತ್ತು. ಇಬ್ಬರು ವಕೀಲರು ಸಲ್ಲಿಸಿರುವ ಅರ್ಜಿಗಳಲ್ಲಿ, ಭಕ್ತರು ಇರುವ ವಿಶ್ರಾಂತಿ ಗೃಹಗಳಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ದೇವರ ದರ್ಶನಕ್ಕೆ ಹೋಗುವ ಸರತಿ ಸಾಲು ಪದ್ಧತಿ ಸರಿಯಿಲ್ಲ ಎಂದು ಹೇಳಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ಶಬರಿಮಲೆಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಸೂಚನೆ ನೀಡಿದೆ ಹಾಗೂ ಅಲ್ಲದೆ ಸರತಿ ಸಾಲಿನಲ್ಲಿ ಉಂಟಾಗುವ ಸಮಸ್ಯೆಯನ್ನು ನಿವಾರಿಸಿ ಕ್ರಮ ಕೈಗೊಳ್ಳುವಂತೆ ಕೇರಳ ಸರ್ಕಾರಕ್ಕೆ ಸೂಚನೆ ನೀಡಿದೆ.
ಶಬರಿಮಲೆ ವಿವಾದದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆಯನ್ನು ಪ್ರಾರಂಭಿಸಿರುವ ಕೇರಳ ಹೈಕೋರ್ಟ್, ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಪೊಲೀಸರು ಕೈಗೊಂಡ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಬುಧವಾರ ವಿಚಾರಣೆ ನಡೆಸಲಿದೆ. ಅನಿಲ್ ನರೇಂದ್ರನ್ ಮತ್ತು ಜಿ.ಗಿರೀಶ್ ಅವರನ್ನೊಳಗೊಂಡ ಪೀಠವು ಕ್ರಮಗಳನ್ನು ಪರಿಶೀಲಿಸಲಿದೆ.
ದರ್ಶನ ಪಡೆಯಲು ಗಂಟೆಗಟ್ಟಲೆ ಕಾಯಬೇಕಾದ ಭಕ್ತರಿಗೆ ಸಾಕಷ್ಟು ಪಾರ್ಕಿಂಗ್ ಸೌಲಭ್ಯಗಳು ಮತ್ತು ಆಹಾರ ಮತ್ತು ಪಾನೀಯಗಳನ್ನು ವ್ಯವಸ್ಥೆ ಮಾಡುವಂತೆ ಈ ಹಿಂದೆ ಅದು ಟಿಡಿಬಿ ಮತ್ತು ಪೊಲೀಸರಿಗೆ ನಿರ್ದೇಶನ ನೀಡಿತ್ತು. ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ನ್ಯಾಯಾಲಯಕ್ಕೆ ಹಾಜರಾಗಿ ಜನಸಂದಣಿಯನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ದಿನಕ್ಕೆ ಲಕ್ಷ ಮಂದಿ ಭೇಟಿ:
ಪ್ರಸ್ತುತ 1.2 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದಾರೆ , ಈ ಪೈಕಿ ಸುಮಾರು 80,000 ಜನರು ವರ್ಚುವಲ್ ಕ್ಯೂಗಳನ್ನು ಬಳಸುತ್ತಾರೆ, 20,000 ಜನರು ಸ್ಪಾಟ್ ಬುಕಿಂಗ್ ಮೂಲಕ ಮತ್ತು ಉಳಿದವರು ಸಾಂಪ್ರದಾಯಿಕ ಮಾರ್ಗಗಳ ಮೂಲಕ ಬರುತ್ತಾರೆ. ಒಂದು ಗಂಟೆಯಲ್ಲಿ 4,200 ಜನರಿಗೆ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಲು ಅವಕಾಶ ನೀಡಿದರೆ ಜನಸಂದಣಿಯನ್ನು ನಿಭಾಯಿಸಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.



