Mysore
20
overcast clouds
Light
Dark

ಇಂದು ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು : ಕಾವಾಡಿ ದಂಪತಿ ಬೊಮ್ಮ ಬೆಳ್ಳಿ ಜೊತೆ ಸಂವಾದ

ಮೈಸೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಮೈಸೂರಿಗೆ ಆಗಮಿಸಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇಂದು ಮಧ್ಯಾಹ್ನ 12.30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಹೆಲಿಕಾಪ್ಟರ್​ನಲ್ಲಿ ತಮಿಳುನಾಡಿಗೆ ತೆರಳಲಿದ್ದಾರೆ. ಮಧುಮಲೈ ಹುಲಿಸಂರಕ್ಷಿತ ವ್ಯಾಪ್ತಿಯ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಆಸ್ಕರ್ ಪ್ರಶಸ್ತಿ ವಿಜೇತ ಕಾವಾಡಿ ದಂಪತಿ, ಮಾವುತರ ಜೊತೆ ರಾಷ್ಟಪತಿ ದ್ರೌಪದಿ ಮುರ್ಮು ಸಂವಾದ ನಡೆಸಲಿದ್ದಾರೆ. ಬಳಿಕ ಸಂಜೆ 5:45ಕ್ಕೆ ಮೈಸೂರಿಗೆ ಆಗಮಿಸಿ ಚೆನ್ನೈಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮೈಸೂರು ಜಿಲ್ಲಾಡಳಿತ ರಾಷ್ಟ್ರಪತಿ ಮುರ್ಮು ಅವರ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಂಡಿದೆ.

ಇನ್ನು ಮಧುಮಲೈ ಹುಲಿಸಂರಕ್ಷಿತ ವ್ಯಾಪ್ತಿಯ ತೆಪ್ಪಕಾಡು ಆನೆ ಶಿಬಿರದಲ್ಲಿ ಆಸ್ಕರ್ ವಿಜೇತ, ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಹಾಗೂ ಬೆಳ್ಳಿ ದಂಪತಿ ವಾಸ ಮಾಡುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೊಮ್ಮನ್ ದಂಪತಿಯನ್ನು ಭೇಟಿ ಮಾಡಲಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತೆಪ್ಪಕಾಡಿಗೆ ಭೇಟಿ ಕೊಟ್ಟಿದ್ದರು.

ಮತ್ತೊಂದೆಡೆ ಮಧುಮಲೈ ಬಳಿಯ ತೆಪ್ಪಕಾಡು ಆನೆ ಶಿಬಿರ ಗುಂಡ್ಲುಪೇಟೆ ಗಡಿಭಾಗದಲ್ಲಿ ಬರುವುದರಿಂದ ಜೊತೆಗೆ ಪ್ರವಾಸ ಮಾರ್ಗ ದಿಢೀರ್ ಬದಲಾಗಿ ರಸ್ತೆ ಮಾರ್ಗದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಚರಿಸಬೇಹುದಾದ ಪ್ರಮೇಯ ಬರಬಹುದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಗುಂಡ್ಲುಪೇಟೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.‌ ಮೈಸೂರಿನಿಂದ ಬಂಡೀಪುರದ ಗಡಿವರೆಗೆ ರಾಷ್ಟ್ರಪತಿಗಳ ಕಾನ್ವೆ ಶುಕ್ರವಾರ ಸಂಜೆ ಪೂರ್ವ ತಾಲೀಮು ನಡೆಸಿದ್ದು, ಗುಂಡ್ಲುಪೇಟೆ ಹೊರವಲಯದಲ್ಲಿ ಈಗಾಗಲೇ ಹೆಲಿಪ್ಯಾಡ್ ಅನ್ನು ನಿರ್ಮಾಣ ಮಾಡಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ