ಬೆಂಗಳೂರು : ದಲಿತ ಮುಖಂಡ ಸಂಸದ ವಿ.ಶ್ರೀನಿವಾಸ ಪ್ರಸಾದ್ ನಿಧನರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಭಾವನೆಗಳನ್ನು ಹಂಚಿಕೊಂಡಿರುವ ಅವರು, ʼ ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ ಮುತ್ಸದ್ದಿ ನಾಯಕ ಶ್ರೀನಿವಾಸಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡುಮಾಡಿದೆ. ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ.
ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನೇತಾರರಾಗಿ ಕೆಲಸ ಮಾಡಿದ್ದ ಶ್ರೀನಿವಾಸ ಪ್ರಸಾದ್ ಸಚಿವರಾಗಿ ಮತ್ತು ಲೋಕಸಭಾ ಸದಸ್ಯರಾಗಿ ದೀರ್ಘ ಕಾಲ ಜನ ಸೇವೆ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕ.
ಹಳೆಮೈಸೂರು ಭಾಗದಲ್ಲಿ ಬಹಳಷ್ಟು ಕಾಲ ನಾವು ಬೇರೆಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದೆವು. ಇತ್ತೀಚೆಗಷ್ಟೇ ನಾನು ಭೇಟಿಯಾಗಿದ್ದ ಸಂದರ್ಭದಲ್ಲಿ ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಆಗ ಗೆಲುವಾಗಿದ್ದ ಪ್ರಸಾದ್ ಇಷ್ಟು ಶೀಘ್ರ ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರವಾದ ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.