Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಪ್ರಧಾನಿ ಮೋದಿಗೆ ಮಣಿಪುರಕ್ಕಿಂತ ಇಸ್ರೇಲ್ ಬಗ್ಗೆಯೇ ಹೆಚ್ಚು ಕಾಳಜಿ: ರಾಹುಲ್ ಗಾಂಧಿ

ಐಝ್ವಾಲ್:  ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರಕ್ಕಿಂತ ಇಸ್ರೇಲ್‌ ರಾಷ್ಟ್ರದ ಬಗ್ಗೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹೆಚ್ಚು ಕಾಳಜಿ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಕಿಡಿಕಾರಿದ್ದಾರೆ.

ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಐಝ್ವಾಲ್’ನಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ.

ಪಾದಯಾತ್ರೆ ವೇಳೆ ಇಲ್ಲಿನ ರಾಜಭವನದ ಬಳಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಆವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

1986ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಗಲಭೆ ಪೀಡಿತ ಈಶಾನ್ಯ ರಾಜ್ಯದಲ್ಲಿ ಕಾಂಗ್ರೆಸ್ ಶಾಂತಿ ಸ್ಥಾಪಿಸಿತ್ತು. ಆದರೀಗ ಮಣಿಪುರ ಏಕೀಕೃತ ರಾಜ್ಯವಾಗಿ ಉಳಿದಿಲ್ಲ. ಜನಾಂಗೀಯ ಆಧಾರದ ಮೇಲೆ ಎರಡು ರಾಜ್ಯಗಳಾಗಿ ವಿಂಗಡಿಸಲಾಗಿದೆ.

ಮಣಿಪುರದ ಬದಲಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಇಸ್ರೇಲ್ (ಇಸ್ರೇಲ್-ಹಮಾಸ್ ಸಂಘರ್ಷ)ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆಯೇ ಹೆಚ್ಚು ಕಾಳಜಿಯಿದೆ. ಮಣಿಪುರದ ಬಗ್ಗೆ ಇವರಿಗೆ ಆಸಕ್ತಿಯಿಲ್ಲ. ಮಣಿಪುರದಲ್ಲಿ ಜನರು ಹತ್ಯೆಗೀಡಾಗಿದ್ದರು. ಮಹಿಳೆಯರಿಗೆ ಕಿರುಕುಳ ನೀಡಲಾಗಿತ್ತು. ಮಕ್ಕಳನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಿದರು.

ಪರಸ್ಪರ ಗೌರವಿಸುವುದು, ಇತರೆ ವಿಚಾರಗಳು, ಧರ್ಮಗಳು, ಭಾಷೆಗಳ ಕಲಿಯುವುದು, ತನ್ನನ್ನು ತಾನು ಪ್ರೀತಿಸುವುದು ನಮ್ಮ ಕಲ್ಪನೆಯಾಗಿದೆ. ಇವುಗಳ ಮೇಲೆ ಬಿಜೆಪಿಯ ದಾಳಿಯಾಗುತ್ತಿದೆ. ವಿವಿಧ ಸಮುದಾಯಗಳು, ಧರ್ಮಗಳು, ಭಾಷೆಗಳ ಮೇಲೆ ಅವರು ದಾಳಿ ಮಾಡುತ್ತಿದ್ದಾರೆ. ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದ್ದಾರೆ. ಇದು ಭಾರತದ ಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ತಿಳಿಸಿದರು.

40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!