ನವದೆಹಲಿ : ಮಣಿಪುರ ಹಿಂಸಾಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಆಗಾಗ ಹಿಂಸಾಚಾರ, ಹತ್ಯೆಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವ ತೋರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ.
ಇಬ್ಬರು ವಿದ್ಯಾರ್ಥಿಗಳ ಶವಗಳಿರುವ ಫೋಟೋ ವೈರಲ್ ಆಗಿದೆ. ಇಬ್ಬರ ಪೈಕಿ ಒಬ್ಬಾಕೆ ಅಪ್ರಾಪ್ತೆ. ಶವಗಳು ಪತ್ತೆಯಾಗಿಲ್ಲ. ಹತ್ಯೆಗೂ ಮುನ್ನ ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಸಂಬಂಧ ತನಿಖೆ ನಡೆಸುತ್ತಿದೆ.
ವೈರಲ್ ಆದ ಫೋಟೋದಲ್ಲಿ 17 ವರ್ಷದ ಹುಡುಗಿ ಮತ್ತು 20 ವರ್ಷದ ಯುವಕ ಇದ್ದಾರೆ. ಶಸ್ತ್ರ ಸಜ್ಜಿತ ಗುಂಪು ಇವರಿಬ್ಬರ ಹಿಂದೆ ನಿಂತಿದೆ. ಹುಡುಗಿ ಬಿಳಿ ಟಿ-ಶರ್ಟ್‌ನಲ್ಲಿದ್ದಾಳೆ. ಯುವಕ ಚೆಕ್ಡ್ ಶರ್ಟ್‌ನಲ್ಲಿದ್ದಾನೆ. ಅವರ ಹಿಂದೆ ಬಂದೂಕುಗಳನ್ನು ಹಿಡಿದ ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ.
ಮತ್ತೊಂದು ಫೋಟೋದಲ್ಲಿ ಅವರ ಮೃತದೇಹಗಳು ನೆಲದ ಮೇಲೆ ಬಿದ್ದಿವೆ. ಚುರಚಂದಪುರದಿಂದ 35 ಕಿ.ಮೀ ದೂರದಲ್ಲಿರುವ ಬಿಷ್ಣುಪುರ ಜಿಲ್ಲೆಯಲ್ಲಿ ಇವರಿಬ್ಬರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಎರಡು ಜಿಲ್ಲೆಗಳ ನಡುವಿನ ಪ್ರದೇಶದಿಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಅಪಹರಿಸಿ ಚುರಚಂದಪುರಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಜುಲೈನಲ್ಲಿ ಈ ವಿದ್ಯಾರ್ಥಿಗಳು, ಅಂಗಡಿಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಇಷ್ಟು ದಿನ ಬೇಕಾಯಿತು ಎಂದು ಹಲವರು ಪ್ರಶ್ನಿಸಿದ್ದಾರೆ.