ಕಳೆದ ವಾರ ನಡೆದ ಸಂಸತ್ ದಾಳಿ ಪ್ರಕರಣದಲ್ಲಿ ಈಗಾಗಲೇ ಮೈಸೂರು ಮೂಲದ ಮನೋರಂಜನ್ ಸೇರಿದಂತೆ ಆರು ಜನರ ಬಂಧನವಾಗಿದ್ದು, ಇದೀಗ ಕರ್ನಾಟಕದ ಬಾಗಲಕೋಟೆ ಮೂಲದ ಸಾಯಿಕೃಷ್ಣ ಎಂಬಾತನನ್ನು ದೆಹಲಿ ಪೊಲೀಸರು ಕರೆದೊಯ್ದಿದ್ದಾರೆ. ಈತ ಬಾಗಲಕೋಟೆ ನಿವೃತ್ತ ಡಿವೈಎಸ್‌ಪಿ ವಿಠ್ಠಲ ಜಗಲಿ ಅವರ ಪುತ್ರ ಎಂಬುದು ತಿಳಿದುಬಂದಿದೆ.
ಮನೋರಂಜನ್ ತನ್ನ ಡೈರಿಯಲ್ಲಿ ಸಾಯಿಕೃಷ್ಣ ಹೆಸರನ್ನು ಬರೆದಿದ್ದ ಆಧಾರದ ಮೇಲೆ ಇಂದು ಸಂಜೆ ಏಳು ಗಂಟೆಗೆ ಬಾಗಲಕೋಟೆಯಲ್ಲಿನ ಸಾಯಿಕೃಷ್ಣ ಮನೆಗೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಸಾಯಿಕೃಷ್ಣನನ್ನು ಕರೆದೊಯ್ದಿದ್ದಾರೆ. ಮನೋರಂಜನ್ ಹಾಗೂ ಸಾಯಿಕೃಷ್ಣ 2008-09ರಲ್ಲಿ ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ನೇಹಿತರಾಗಿದ್ದು, ಒಂದೇ ರೂಮ್‌ನಲ್ಲಿ ವಾಸವಿದ್ದರು ಎಂಬ ಮಾಹಿತಿ ಸಹ ಕೇಳಿಬಂದಿದೆ.
2012ರಲ್ಲಿ ದೆಹಲಿಗೆ ತೆರಳಿದ್ದ ಸಾಯಿಕೃಷ್ಣ ಎನ್ರಿಚ್ ವಿಡಿಯೊ ಕಂಪೆನಿಯಲ್ಲಿ ಸೀನಿಯರ್ ಸಾಫ್ಟ್‌ವೇರ್ ಆಗಿದ್ದಾನೆ. ದೆಹಲಿಯ ಕಮಿಷನರೇಟ್‌ನ ಪಿಎಸ್‌ಐ ಪಿಂಟು ಶರ್ಮಾ ಹಾಗೂ ನಾಲ್ಕು ಸಿಬ್ಬಂದಿಗಳ ತಂಡ ಸಾಯಿಕೃಷ್ಣನನ್ನು ಬಂಧಿಸಿ ನವನಗರ ಠಾಣೆಗೆ ಕರೆದೊಯ್ದು ಬಳಿಕ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.