Mysore
14
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಸಂಸತ್ ಭದ್ರತಾ ಲೋಪ: ಬಂಧನಕ್ಕೊಳಗಾದ ನಾಲ್ವರ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಮಾಹಿತಿ

ಸಂಸತ್ ಭವನಕ್ಕೆ ನುಗ್ಗಿ ಬಣ್ಣದ ಹೊಗೆ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೈಸೂರಿನ ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಶಿಂಧೆ, ನೀಲಮ್ ಸೇರಿದಂತೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಈ ಪೈಕಿ ಮನೋರಂಜನ್‌ ಕರ್ನಾಟಕದ ಮೈಸೂರು ಮೂಲದವನಾಗಿದ್ದು, ಬಿಇ ಪದವೀಧರ ಎನ್ನಲಾಗಿದೆ. ಮೈಸೂರಿನ ಸೇಂಟ್ ಜೋಸೆಫ್‌ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಮನೋರಂಜನ್‌ ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿಐಟಿ ಕಾಲೇಜಿನಲ್ಲಿ ಬಿಇ ವಿದ್ಯಾಭ್ಯಾಸ ಮಾಡಿದ್ದನು. ಕ್ರಾಂತಿಕಾರಿಗಳ ವಿಚಾರಧಾರೆಯುಳ್ಳ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದ ಮನೋರಂಜನ್‌ ಮನೆಯಲ್ಲಿ ವಿವಾಹವಾಗು ಎಂದರೂ ಕೇಳದೇ ಸಮಾಜದ ಸುಧಾರಣೆ ಮಾಡ್ತೀನಿ ಎಂದು ಹೇಳಿ ಯಾವಾಗಲೂ ಪುಸ್ತಕಗಳನ್ನು ಓದುತ್ತಿದ್ದನಂತೆ.

ನೀಲಮ್:‌ ಇನ್ನು ನೀಲಮ್‌ ತಾಯಿ ನೀಡಿರುವ ಮಾಹಿತಿ ಪ್ರಕಾರ ನೀಲಮ್‌ ನಿರುದ್ಯೋಗದ ಬಗ್ಗೆ ಚಿಂತಿತಳಾಗಿದ್ದಳು. ಒಳ್ಳೆಯ ವಿದ್ಯಾಭ್ಯಾಸ ಪಡೆದರೂ ಕೆಲಸ ಸಿಗುತ್ತಿಲ್ಲ, ಇದಕ್ಕಿಂತ ಸಾಯುವುದೇ ಒಳ್ಳೆಯದು ಎಂದು ತನ್ನ ತಾಯಿಯ ಬಳಿ ನೀಲಮ್‌ ಹೇಳಿದ್ದಳಂತೆ. ಇನ್ನು ಹರಿಯಾಣದ ಜಿಂದ್‌ ಮೂಲದ ನೀಲಮ್‌ 30 ವರ್ಷ ವಯಸ್ಸಿನವಳಾಗಿದ್ದು ಬಿಎ, ಎಂಎ, ಬಿಎಡ್‌, ಎಂಎಡ್‌ ಹಾಗೂ ನೀಟ್‌ ಪದವಿಗಳನ್ನು ಹೊಂದಿದ್ದಾಳೆ. ಇದಾದ ಬಳಿಕ ಹಲವಾರು ದಿನಗಳ ಕಾಲ ನಿರುದ್ಯೋಗಿಯಾಗಿದ್ದ ನೀಲಮ್ ಹರಿಯಾಣ ನಾಗರೀಕ ಸೇವೆಗಳ ಪರೀಕ್ಷೆಗೂ ಸಹ ಸಿದ್ಧತೆಪಡಿಸಿಕೊಳ್ಳುತ್ತಿದ್ದಳಂತೆ. ಈಕೆಯ ಕುರಿತು ಮಾತನಾಡಿರುವ ಕುಟುಂಬಸ್ಥರು ಈಕೆಗೆ ಯಾವುದೇ ಸಂಘಟನೆಗಳ ಜತೆ ಹಾಗೂ ಪಕ್ಷಗಳ ಜತೆ ನಂಟಿಲ್ಲ ಎಂದು ಹೇಳಿದ್ದು ಈ ಹಿಂದೆ 2020-2021ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಳು ಹಾಗೂ ಇದೇ ವರ್ಷ ನಡೆದಿದ್ದ ರೆಸ್ಲರ್ಸ್‌ ಪ್ರತಿಭಟನೆಯಲ್ಲಿಯೂ ಸಹ ಭಾಗವಹಿಸಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಎರಡೂ ಪ್ರತಿಭಟನೆಯಲ್ಲಿಯೂ ನೀಲಮ್‌ ಬಂಧನಕ್ಕೊಳಗಾಗಿದ್ದಳು.

ಸಾಗರ್‌ ಶರ್ಮಾ: 27 ವರ್ಷದ ಸಾಗರ್‌ ಶರ್ಮಾ ಲಕ್ನೋದ ಅಲಾಮ್‌ಭಾಗ್‌ ಮೂಲದನಾಗಿದ್ದು, ಸಾಗರ್‌ ಶರ್ಮಾ ಕಿರಿಯ ಸೋದರಿ ನೀಡಿರುವ ಮಾಹಿತಿ ಪ್ರಕಾರ ಕಳೆದ ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾಗರ್‌ ಶರ್ಮಾ ಈ ವರ್ಷದ ಆಗಸ್ಟ್‌ನಲ್ಲಿ ಲಕ್ನೋಗೆ ಮರಳಿದ್ದನಂತೆ. ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಸಾಗರ್‌ ಶರ್ಮಾ ಸದ್ಯ ಎಲೆಕ್ಟ್ರಾನಿಕ್‌ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಇನ್ನು ಸಾಗರ್‌ ಶರ್ಮಾ ತಂದೆ ಶಂಕರ್‌ಲಾಲ್‌ ಶರ್ಮಾ ವೃತ್ತಿಯಲ್ಲಿ ಬಡಗಿಯಾಗಿದ್ದು, ತಾಯಿ ಹೆಸರು ಲಾಲಿ ಎಂದು ತಿಳಿದುಬಂದಿದೆ.

ಅಮೋಲ್‌ ಶಿಂಧೆ: ಅಮೋಲ್‌ ಧನರಾಜ್‌ ಶಿಂಧೆ ಮಹಾರಾಷ್ಟ್ರದ ಲಟೂರ್‌ ಜಿಲ್ಲೆಯ ಚಕುರ್‌ ತೆಹ್ಸಿಲ್‌ನ ಝಾರಿ ಗ್ರಾಮದವನಾಗಿದ್ದಾನೆ. 25 ವರ್ಷದ ಅಮೋಲ್‌ ಶಿಂಧೆ ಭಾರತೀಯ ಸೇನೆ ಸೇರಬೇಕೆಂಬ ಗುರಿ ಹೊಂದಿದ್ದ ಹಾಗೂ ಸೇನೆ ನೇಮಕಾತಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಲಾಗದೇ ಧೃತಿಗೆಟ್ಟಿದ್ದ ಎಂಬ ವಿಚಾರವನ್ನು ಆತನ ತಾಯಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!