ಬೆಂಗಳೂರು: ರಾಜ್ಯಾದ್ಯಂತ ಗ್ರಾಮಪಂಚಾಯ್ತಿಗಳಲ್ಲಿ ಪರಿಶಿಷ್ಟ ಜಾತಿ/ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಬಳಸಲು ಪಂಚತಂತ್ರ-2 ಯೋಜನೆ ಜಾರಿ ಮಾಡಿವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಪರಿಷತ್‍ನಲ್ಲಿ ಹೇಳಿದರು.
ಸದಸ್ಯ ಡಾ.ಡಿ.ತಿಮ್ಮಯ್ಯನವರ ಪ್ರಶ್ನೆಗೆ ಉತ್ತರಿಸಿದ ಅವರು, 2022-23ನೇ ಸಾಲಿನಲ್ಲಿ ರಾಜ್ಯಾದ್ಯಂತ ಗ್ರಾಮಪಂಚಾಯ್ತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗಾಗಿ 716 ಕೋಟಿ ಅನುದಾನ ಮೀಸಲಿಡಲಾಗಿತ್ತು ಎಂದರು.
ಮೀಸಲಿಟ್ಟ ಹಣದಲ್ಲಿ 501 ಕೋಟಿ ಹಣವನ್ನು ಬಳಕೆ ಮಾಡಿದ್ದರೆ 216 ಕೋಟಿ ಖರ್ಚಾಗದೆ ಉಳಿದಿದೆ. ಇದು ಏಕೆ ಖರ್ಚಾಗಿಲ್ಲ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಈ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಲು ನಾವು ಪಂಚತಂತ್ರ-2 ಯೋಜನೆ ಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು.
ಇದರಿಂದಾಗಿ ಪ್ರತಿಯೊಂದು ಗ್ರಾಪಂಗಳಲ್ಲಿ ಎಷ್ಟು ಹಣ ಖರ್ಚಾಗಿದೆ, ಯಾವ ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಿಗಲಿದೆ. ಒಟ್ಟಾರೆ ಯಾವ ಉದ್ದೇಶಕ್ಕೆ ಹಣ ಮೀಸಲಿಡುತ್ತೇವೋ ಅದು ನೂರಕ್ಕೆ 100ರಷ್ಟು ಖರ್ಚಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.