ಅಹಮದಾಬಾದ್ : ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ 42.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 141 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 12 ನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್ ಗೆ ಬಂದ ಪಾಕಿಸ್ತಾನ ಆರಂಭಿಕ ಬ್ಯಾಟರ್ಸ್ ಆರಂಭಿಕ ಓವರ್ ಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ತೋರಿದರು.
8ನೇ ಓವರ್‌ನಲ್ಲಿ ಸಿರಾಜ್ ಬೌಲಿಂಗ್ ನಲ್ಲಿ ಅಬ್ದುಲ್ಲಾ ಶಫೀಕ್ ರನ್ನು ಎಲ್ ಬಿಡಬ್ಲ್ಯೂ ಮಾಡುವುದರೊಂದಿಗೆ ತಂಡಕ್ಕೆ ಆರಂಭಿಕ ಮುನ್ನಡೆ ತಂದಕೊಟ್ಟರು. ಇತ್ತ ಇಮಾಮ್ ಉಲ್ ಹಕ್ 36 ರನ್ ಗಳಿಸಿರುವಾಗ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಗೆ ಕ್ಯಾಚ್ ನೀಡಿ ಔಟ್ ಆದರು. ಆರಂಭಿಕ ಬ್ಯಾಟರ್ ಗಳ ವಿಕೆಟ್ ಬೇಗ ಪತನವಾದ ನಂತರ ಜವಾಬ್ದಾರಿಯುತ ಆಟ ಆಡಿದ ನಾಯಕ ಬಾಬರ್ ಅಝಮ್ ಹಾಗೂ ರಿಜ್ವಾನ್ ಉತ್ತಮ ಜೊತೆಯಾಟ ನೀಡಿದರು.
ನಾಯಕ ಬಾಬರ್ ಅಝಮ್ 7 ಬೌಂಡರಿ ಸಹಿತ 50 ರನ್ ಗಳಿಸಿ ಸಿರಾಜ್ ಗೆ ಕ್ಲೀನ್ ಬೌಲ್ಡ್ ಆದರೆ, ಮುಹಮ್ಮದ್ ರಿಜ್ವಾನ್ 49 ರನ್ ಗೆ ಜಸ್ಪ್ರಿತ್ ಬೂಮ್ರ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಯಾವೊಬ್ಬ ಪಾಕ್ ಬ್ಯಾಟರ್ ಭಾರತದ ಆಕ್ರಮಣಕಾರಿ ಬೌಲಿಂಗ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.
ಕುಲದೀಪ್ ಯಾದವ್ ಒಂದೇ ಓವರ್ ನಲ್ಲಿ ಸೌದ್ ಶಕೀಲ್( 6)ಹಾಗೂ ಇಫ್ತಿಕಾರ್ ಅಹ್ಮದ್( 4) ವಿಕೆಟ್ ಕಬಳಿಸಿ ಪಾಕ್ ಬ್ಯಾಟಿಂಗ್ ಬಲ ಮುರಿದರು. ಶಾದಾಬ್ ಖಾನ್ ಮಹಮ್ಮದ್ ನವಾಝ್ 4, ಹಸನ್ ಅಲಿ 12 ರನ್ ಗಳಿಸಿ ಪೆವಿಲಿಯನ್ ಪರೇಡ್ ಗೆ ಸಾಥ್ ನೀಡಿದರು. ಹಾರಿಸ್ 2 ರನ್ ಗಳಿಸಿ ಎಲ್ ಬಿ ಡಬ್ಲ್ಯೂ ಆದರು. ಶಾಹಿನ್ ಅಫ್ರಿದಿ 2 ರನ್ ಗಳಿಸಿದರು.
ಭಾರತ ತಂಡದ ಪರ ಜಸ್ಪ್ರಿತ್ ಬೂಮ್ರ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.