ಬೆಂಗಳೂರು: ಅತ್ಯಾಚಾರ, ಅನಾಚಾರ, ಶಾಂತಿಭಂಗ ಮುಂತಾದ ಸಮಾಜಘಾತುಕ ಕೃತ್ಯಗಳನ್ನು ನಡೆಸುತ್ತಿರುವ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಬಗ್ಗೆ ನಮ್ಮ ಸರ್ಕಾರ ಚಿಂತನೆ ನಡೆಸಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದು 2019ರ ಪ್ರಕರಣವೊಂದನ್ನು ಉಲ್ಲೇಖಿಸಲಾಗಿದೆ. ಚಿತ್ತಾಪುರದಲ್ಲಿ ಆರ್‍ಎಸ್‍ಎಸ್‍ನ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ವಂಚಿಸಿ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಚಿತ್ತಾಪುರದಲ್ಲಿ RSSನ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ವಂಚಿಸಿ, ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುವುದೇ RSS ಶಾಖೆಯ ನಿತ್ಯ ಪಾಠವೇ @BJP4Karnataka?
ಅತ್ಯಾಚಾರ, ಅನಾಚಾರ, ಶಾಂತಿಭಂಗ ಮುಂತಾದ ಸಮಾಜಘಾತುಕ ಕೃತ್ಯಗಳನ್ನು ನಡೆಸುತ್ತಿರುವ ಸಂಘಟನೆಯ ಚಟುವಟಿಕೆಗಳನ್ನು ನಿಯಂತ್ರಿಸುವ… pic.twitter.com/tYrpp5iXAx
— Karnataka Congress (@INCKarnataka) June 17, 2023
ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯವೆಸಗುವುದೇ ಆರ್‍ಎಸ್‍ಎಸ್ ಶಾಖೆಯ ನಿತ್ಯ ಪಾಠವೇ ಎಂದು ಬಿಜೆಪಿಯನ್ನು ಪ್ರಶ್ನಿಸಲಾಗಿದೆ.
ಟ್ವೀಟ್‍ನಲ್ಲಿ ಮಹಿಳೆ ನೀಡಿರುವ ದೂರು ಹಾಗೂ ಅದನ್ನು ಆಧರಿಸಿ ದಾಖಲಾಗಿರುವ ಎಫ್‍ಐಆರ್ ಬಗ್ಗೆ ಮಾಹಿತಿ ನೀಡಲಾಗಿದೆ. ಅದರಲ್ಲಿ ವ್ಯವಹಾರಿಕ ವ್ಯಕ್ತಿಯೊಬ್ಬರು ವಿವಾಹಿತ ಮಹಿಳೆಗೆ ವಂಚಿಸಿ ಅಕ್ರಮ ಸಂಬಂಧ ಬೆಳೆಸಿದ್ದು, ಇತ್ತೀಚೆಗೆ ಆಕೆಯನ್ನು ನಿರಾಕರಿಸುತ್ತಿದ್ದಾರೆ ಎಂಬ ಆರೋಪ ಇದೆ. ಮಹಿಳೆಯಿಂದ ಸಾಲ ಮಾಡಿಸಿ, ಚಿನ್ನ ಪಡೆದುಕೊಂಡು ಅವರ ಸಾಂಸಾರಿಕ ಜೀವನವನ್ನು ಹಾಳು ಮಾಡಲಾಗಿದೆ ಎಂದು ದೂರಲಾಗಿದೆ.
ಟ್ವಿಟರ್ ನಲ್ಲಿ ಆರ್‍ಎಸ್‍ಎಸ್ ಸಮವಸ್ತ್ರಧಾರಿಗಳ ಫೋಟೋ ಲಗತ್ತಿಸಿದ್ದು ಅದರಲ್ಲಿ ಒಬ್ಬ ವ್ಯಕ್ತಿಯ ಮುಖಕ್ಕೆ ವೃತ್ತದ ಗುರುತು ಮಾಡಲಾಗಿದೆ.
ಈ ಮೊದಲು ಬಜರಂಗದಳ, ಆರ್‍ಎಸ್‍ಎಸ್ ಸೇರಿದಂತೆ ಯಾವುದೇ ವ್ಯಕ್ತಿಗಳು ಕಾನೂನು ಮೀರಿ ವರ್ತಿಸಿದರೆ ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು
ಈಗ ಅವರದೇ ಕ್ಷೇತ್ರದ 4 ವರ್ಷಗಳ ಹಿಂದಿನ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಶಾಂತಿಭಂಗ ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳನ್ನು ನಿಯಂತ್ರಿಸಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಗ್ಯಾರಂಟಿ ಯೋಜನೆಗಳ ವಿಳಂಬದಿಂದಾಗಿ ಜನರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕೇಳಿಬರುತ್ತಿದ್ದು, ಅದರ ದಿಕ್ಕು ತಪ್ಪಿಸಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂಬ ಅಸಮಾಧಾನವೂ ಕೇಳಿಬಂದಿದೆ.





