Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಒಂದು ರಾಷ್ಟ್ರ-ಒಂದು ಚುನಾವಣೆ: ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ 8 ಸದಸ್ಯರ ಸಮಿತಿ ರಚನೆ

ನವದೆಹಲಿ : ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಷಯದ ಬಗ್ಗೆ ಶೀಘ್ರವಾಗಿ ಪರಿಶೀಲಿಸಿ ಶಿಫಾರಸು ಮಾಡಲು 8 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ಕೇಂದ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಮಾಜಿ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್, ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್‌.ಕೆ ಸಿಂಗ್ ಮತ್ತಿತರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಈ ಸಮಿತಿಯು ತಕ್ಷಣವೇ ಕಾರ್ಯ ನಿರ್ವಹಣೆಯನ್ನು ಪ್ರಾರಂಭಿಸಲಿದ್ದು, ಶೀಘ್ರವಾಗಿ ಶಿಫಾರಸು ಮಾಡಲಿದೆ. ಮಾಜಿ ಲೋಕಸಭಾ ಕಾರ್ಯದರ್ಶಿ ಸುಭಾಷ್ ಸಿ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಕೇಂದ್ರ ಜಾಗೃತ ಆಯೋಗದ ಮಾಜಿ ಮುಖ್ಯಸ್ಥ ಸಂಜಯ್ ಕೊಠಾರಿ ಸಹ ಸದಸ್ಯರಾಗಿದ್ದಾರೆ. ಸಮಿತಿಯ ಸಭೆಗಳಲ್ಲಿ ವಿಶೇಷ ಆಹ್ವಾನಿತರಾಗಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಭಾಗವಹಿಸಲಿದ್ದು, ಕಾನೂನು ವ್ಯವಹಾರಗಳ ಕಾರ್ಯದರ್ಶಿ ನಿತೇನ್ ಚಂದ್ರ ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ.

ಸಮಿತಿಯು ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶಕ್ಕಾಗಿ ಸಂವಿಧಾನ ತಿದ್ದುಪಡಿ ಸೇರಿದಂತೆ ಮತ್ತಿತರ ಯಾವುದೇ  ಅಗತ್ಯ ಕಾನೂನುಗಳು ಮತ್ತು ನಿಯಮಗಳನ್ನು ಪರಿಶೀಲಿಸಿ, ಶಿಫಾರಸು ಮಾಡುತ್ತದೆ. ಅಲ್ಲದೇ, ಸಂವಿಧಾನದ ತಿದ್ದುಪಡಿಗಳಿಗೆ ರಾಜ್ಯಗಳ ಅನುಮೋದನೆಯ ಅಗತ್ಯವಿದ್ದಲ್ಲಿ ಅದನ್ನು ಕೂಡಾ ಪರಿಶೀಲಿಸಿ, ಶಿಫಾರಸು ಮಾಡುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ