Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈತ್ರಿಕೂಟ ಮೆಚ್ಚಿಸಲಲ್ಲ, ಸುಪ್ರೀಂ ಸೂಚನೆಗೆ ಮೇರೆಗೆ ನೀರು ಬಿಡಲಾಗಿದೆ: ರಾಜ್ಯ ಸರ್ಕಾರ ಸ್ಪಷ್ಟನೆ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಲಾಗಿದೆಯೇ ಹೊರತು, ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಮೆಚ್ಚಿಸಲು ತಮಿಳುನಾಡು ರಾಜ್ಯಕ್ಕೆ ನೀರು ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್ ನೇತೃತ್ವದ 26 ವಿರೋಧ ಪಕ್ಷಗಳ INDIA ಬಣದ ಭಾಗವಾಗಿರುವ ಆಡಳಿತಾರೂಢ ಡಿಎಂಕೆ ಜತೆಗಿನ ಮೈತ್ರಿಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿಗೆ ನೀರು ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.

ನ್ಯಾಯಾಲಯದ ಆದೇಶವನ್ನು ಗೌರವಿಸಿದ್ದೇವೆ ಮತ್ತು ಅದನ್ನು ಪಾಲಿಸಿದ್ದೇವೆ. ಅಲ್ಲದೆ, ನಮ್ಮ ರೈತರ ಹಿತಾಸಕ್ತಿ ಕಾಪಾಡಲು ನಿರ್ಧಾರ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಹಿಂದಿನ ಸರ್ಕಾರಗಳು ನೀರು ಬಿಡುಗಡೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳಿಗೆ ಬದ್ಧವಾಗಿದ್ದವು. ಸಮತೋಲಿತ ವಿಧಾನವನ್ನು ಕಾಪಾಡಿಕೊಳ್ಳಲು ನಾವು ನಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದೇವೆ. ಕೃಷಿ ಮತ್ತು ಕುಡಿಯುವ ಉದ್ದೇಶಗಳಿಗಾಗಿ ನೀರಿನ ಕೊರತೆಯನ್ನು ಪರಿಹರಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದರು.

ಈ ಹಿಂದೆ ಜನತಾ ದಳ ಹಾಗೂ ಬಿಜೆಪಿ ಸರಕಾರಗಳು ಎಷ್ಟು ನೀರು ಬಿಡುಗಡೆ ಮಾಡಿದ್ದವು ಎಂಬ ಅಂಕಿಅಂಶಗಳನ್ನು ನೀಡುತ್ತೇವೆ. ಆದರೆ ಈ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ, ಕಾವೇರಿ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯಲು ಚಿಂತನೆ ನಡೆಸಿದ್ದೇವೆ. ಕೇಂದ್ರದಲ್ಲಿ ಬಲಿಷ್ಠ ಸರ್ಕಾರ ಅಧಿಕಾರದೆ ಎಂದು ಹೇಳುತ್ತಿದ್ದವರು ಮಹದಾಯಿ, ಕೃಷ್ಣಾ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿಲ್ಲ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಕಾಂಗ್ರೆಸ್ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಈ ಹಿಂದೆ ಯಾವುದೇ ಸರಕಾರಗಳು ಈ ವಿಚಾರದಲ್ಲಿ ಸರ್ವಾಧಿಕಾರಿ ಧೋರಣೆ ತೋರಿಲ್ಲ. ಆದರೆ ಈಗಿನ ಸರಕಾರ ವಿರೋಧ ಪಕ್ಷವನ್ನಾಗಲಿ, ರೈತರನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾವಾಗಿಯೇ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಇದಲ್ಲದೆ, ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ, ಕಾಂಗ್ರೆಸ್ ಮಿತ್ರ ಪಕ್ಷವಾಗಿದ್ದು, ಮೇಕೆದಾಟು ರ್ಯಾಲಿ ಆಯೋಜಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರಿಗೆ ಮನವರಿಕೆ ಮಾಡಿ ಮೇಕೆದಾಟು ಜಲಾಶಯ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ತನ್ನ ತಪ್ಪುಗಳನ್ನು ಮರೆಮಾಚಲು ಪ್ರತಿಪಕ್ಷಗಳು ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸುತ್ತಿದೆ ಎಂದು ಕಿಡಿಕಾರಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ