Mysore
20
overcast clouds
Light
Dark

ಜಯಲಲಿತಾ ಆಪ್ತೆ ಶಶಿಕಲಾಗೆ ಜಾಮೀನು ರಹಿತ ವಾರೆಂಟ್ ಜಾರಿ

ಬೆಂಗಳೂರು : ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಲಾಗಿತ್ತು ಎಂಬ ವಿಚಾರ ಸಂಬಂಧ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಹಾಗೂ ಇಳವರಸಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ವಾರೆಂಟ್ ಜಾರಿ ಮಾಡಿದೆ.

ಕೋರ್ಟ್ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಶ್ಯೂರಿಟಿಗಳಿಗೂ ಕೂಡ ವಾರೆಂಟ್ ಜಾರಿ ಮಾಡಿದೆ. ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು. ಜೈಲು ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತ್ತು. ತಮ್ಮ ಪ್ರಕರಣದ ರದ್ದು ಕೋರಿ ಹೈಕೋರ್ಟ್‍ಗೆ ಶಶಿಕಲಾ ಅರ್ಜಿ ಸಲ್ಲಿಸಿದ್ದರು. ಆದರೆ ಸೋಮವಾರ ವಿಚಾರಣೆ ಸಂದರ್ಭದಲ್ಲಿ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

ಜಯಲಲಿತಾ ಅವರ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಹಾಗೂ ಇಳವರಸಿ ಇಬ್ಬರೂ ಪರಪ್ಪನ ಅಗ್ರಹಾರದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ಜೈಲಿನಲ್ಲಿಯೂ ಐಷಾರಾಮಿ ಸೌಕರ್ಯಗಳನ್ನು ಪಡೆದಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.

ಅಧಿಕಾರಿಗಳಿಗೆ 2 ಕೋಟಿ ಲಂಚ ನೀಡಿ ಬೆಂಗಳೂರು ಜೈಲಿನ ಹೊರಗೆ ಶಾಪಿಂಗ್ ಗೆ ತೆರಳಿದ್ದ ಶಶಿಕಲಾ ಹಾಗೂ ಇಳವರಸಿಯ ವೀಡಿಯೋ ಸಿಕ್ಕಿತ್ತು. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಘಟನೆ ಕುರಿತು ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದ ವಿಚಾರಣೆಗೆ ಇಳವರಸಿ, ಶಶಿಕಲಾ ಹಾಜರಾಗಿರಲಿಲ್ಲ. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ