ಬೆಂಗಳೂರು : ವಿಧಾನಸಭಾ ಚುನಾವಣೆಗೆ ಕೇವಲ 20 ದಿನಗಳು ಮಾತ್ರ ಬಾಕಿಯಿದ್ದು, ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿಯನ್ನು ಕೊನೇ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ.
ಡಿ.ಕೆ.ಶಿವಕುಮಾರ್ ಅವರಿಗೆ ಪ್ರಬಲ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಕನಕಪುರ ಕ್ಷೇತ್ರದಿಂದ ಬಿಜೆಪಿ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಅಲ್ಲದೇ ಪದ್ಮನಾಭನಗರದಿಂದಲೂ ಆರ್.ಅಶೋಕ್ ಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಆರ್.ಅಶೋಕ್ ಸ್ವಕ್ಷೇತ್ರವಾದ ಪದ್ಮನಾಭನಗರದಲ್ಲಿಯೇ ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ ಹೊಸ ತಂತ್ರ ರೂಪಿಸಿದ್ದು, ಪದ್ಮನಾಭನಗರದ ಅಭ್ಯರ್ಥಿಯನ್ನು ಬದಲಿಸಿದೆ. ಆರ್.ಅಶೋಕ್ ವಿರುದ್ಧ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪದ್ಮನಾಭನಗರದಿಂದ ಡಿ.ಕೆ.ಸುರೇಶ್ ಕಣಕ್ಕಿಳಿಯಲಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಸುರೇಶ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಅಭ್ಯರ್ಥಿ ರಘುನಾಥ್ ನಾಯ್ಡು ಗೆಲ್ಲುವ ವಾತಾವರಣ ಇದೆ. ರಘುನಾಥ್ ನಾಯ್ಡು ಅವರೂ ನಾಮಪತ್ರ ಸಲ್ಲಿಸುತ್ತಾರೆ. ಅದರ ಜೊತೆಗೆ ಡಿ.ಕೆ.ಸುರೇಶ್ ಕೂಡ ನಾಮಪತ್ರ ಸಲ್ಲಿಸುತ್ತಾರೆ ಎಂದರು.
ಈ ಮೂಲಕ ಪದ್ಮನಾಭನಗರ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ.